ಹಾಸನ : ಕ್ಷುಲ್ಲಕ ಕಾರಣಕ್ಕೆ ಹೆತ್ತ ಮಗನನ್ನು ಹತ್ಯೆ ಮಾಡಿದ್ದ ತಾಯಿಯನ್ನ ಬಂಧಿಸುವಲ್ಲಿ ಚನ್ನರಾಯಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ. ಸುಮಾ ಎಂಬ ಮಹಿಳೆ ಬಂಧಿತ ಆರೋಪಿ. ಚನ್ನರಾಯಪಟ್ಟಣದ ಹುಲ್ಲೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಎರಡು ವರ್ಷದ ಮಗನನ್ನು ಸ್ವತಃ ತಾಯಿಯೇ ಕೊಲೆ ಮಾಡಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಪ್ರಕರಣದ ಹಿನ್ನೆಲೆ : ಜ.19 ರಂದು ಗಂಡ ನಂಜಪ್ಪ ಮತ್ತು ಹೆಂಡತಿ ಸುಮಳಾ ನಡುವೆ ಗಲಾಟೆ ನಡೆದಿತ್ತು. ಗಲಾಟೆಯ ಬಳಿಕ ಪತಿ ಜಮೀನು ಕಡೆಗೆ ಹೋಗಿದ್ದ. ಮನೆಯಲ್ಲಿದ್ದ ಮಗ ತನ್ಮಯ್ ವಾಂತಿ ಮಾಡಿಕೊಂಡು ಅಸ್ವಸ್ಥನಾಗಿದ್ದಾನೆ ಎಂದು ಗಂಡನಿಗೆ ತಿಳಿಸಿದ ಪತ್ನಿ, ಬಳಿಕ ಮಗುವನ್ನ ಆಸ್ಪತ್ರೆಗೆ ದಾಖಲು ಮಾಡಿದ್ದಳು. ಆದ್ರೆ, ಚಿಕಿತ್ಸೆಗೆ ಸ್ಪಂದಿಸದ ಮಗು ಸಾವಿಗೀಡಾಗಿತ್ತು. ನಂತರ ಕುಟುಂಬಸ್ಥರು ಸೇರಿ ಮಗುವಿನ ಅಂತ್ಯ ಸಂಸ್ಕಾರ ಮಾಡಿದ್ದರು.
ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ತಂದೆ : ಅಂತ್ಯಸಂಸ್ಕಾರದ ಬಳಿಕ ಪತಿ ನಂಜಪ್ಪನಿಗೆ ಮಗುವಿನ ಸಾವಿನ ಬಗ್ಗೆ ಅನುಮಾನ ಮೂಡಿತ್ತು. ಚನ್ನರಾಯಪಟ್ಟಣ ತಾಲೂಕಿನ ನುಗ್ಗೇಹಳ್ಳಿಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ದೂರು ನೀಡಿದ ಅನ್ವಯ ಪ್ರಕರಣವನ್ನ ದಾಖಲಿಸಿಕೊಂಡು ತನಿಖೆ ಮಾಡಿದ ಪೊಲೀಸರಿಗೆ ಆಶ್ಚರ್ಯ ಕಾದಿತ್ತು.
ಶವ ಹೊರತೆಗೆದು ಮರಣೋತ್ತರ ಪರೀಕ್ಷೆ: ಪತಿ ದೂರಿನಿಂದ ತನಿಖೆ ಆರಂಭಿಸಿದ ಪೊಲೀಸರು, ಜ.25ರಂದು ಮಗುವಿನ ಶವವನ್ನ ಹೊರ ತೆಗೆದು, ಮರಣೋತ್ತರ ಪರೀಕ್ಷೆಗೊಳಪಡಿಸಿದಾಗ ತಲೆಗೆ ಗಂಭೀರ ಗಾಯವಾಗಿರೋದು ತಿಳಿಯುತ್ತೆ. ಆಗ, ತಾಯಿಯನ್ನ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಮಗುವನ್ನ ತಾನೆ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ.
ಅರಿವಿಲ್ಲದೇ ಸಿಟ್ಟಿನಿಂದ ಮಗುವಿಗೆ ಹೊಡೆದಿದ್ದೆ : ನಾನು ಮತ್ತು ನನ್ನ ಪತಿಯ ನಡುವೆ ಸಣ್ಣ ಗಲಾಟೆಯಾಗಿತ್ತು. ಗಲಾಟೆಯಾದ ಬಳಿಕ ಗಂಡ ಕೋಪಗೊಂಡು ಜಮೀನಿನ ಕಡೆಗೆ ಹೋದ್ರು. ಇದೇ ಸಮಯಕ್ಕೆ ಮಗು ಗಲಾಟೆ ಮಾಡಿ ಅಳುವುದಕ್ಕೆ ಪ್ರಾರಂಭಿಸಿತ್ತು. ಸಿಟ್ಟಿನಲ್ಲಿದ್ದ ನಾನು ನನಗೆ ಅರಿವಿಲ್ಲದೇ ಪಕ್ಕದಲ್ಲಿದ್ದ ಕಬ್ಬಿಣದ ವಸ್ತುವಿನಿಂದ ತಲೆಗೆ ಹೊಡೆದೆ. ನಂತರ ಮಗು ವಾಂತಿ ಮಾಡಿಕೊಳ್ಳುಲು ಪ್ರಾರಂಭಿಸಿತು.
ತಕ್ಷಣ ಆಸ್ಪತ್ರೆಗೆ ದಾಖಲು ಮಾಡಿ ಮಗುವಿಗೆ ಚಿಕಿತ್ಸೆ ಕೊಡಿಸಿದ್ರೂ ಬದುಕಲಿಲ್ಲ ಎಂಬ ಸತ್ಯ ಬಾಯ್ಬಿಟ್ಟಿದ್ದಾಳೆ. ಗಂಡ-ಹೆಂಡ್ತಿ ಜಗಳದಲ್ಲಿ ತಾಯಿ ಮಗುವಿನ ಸಾವಿಗೆ ಕಾರಣವಾಗಿದ್ದಾಳೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿ ಸುಮಳಾ ನ್ಯಾಯಾಂಗ ಬಂಧನದಲ್ಲಿದ್ದಾಳೆ.