ಹಾಸನ: ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಗೆ ಜೆಡಿಎಸ್ ಸದಸ್ಯರು ಸಾಮೂಹಿಕವಾಗಿ ಗೈರಾಗಿದ್ದರಿಂದ ಸಭೆಯನ್ನು ಮುಂದೂಡಲಾಗಿದೆ.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿ ಜಿ.ಪಂ ಅಧ್ಯಕ್ಷರಾಗಿದ್ದ ಶ್ವೇತಾ ದೇವರಾಜ್ ನೇತೃತ್ವದಲ್ಲಿ ಸಾಮಾನ್ಯ ಸಭೆ ಕರೆಯಲಾಗಿತ್ತು. ಜಿಲ್ಲಾ ಪಂಚಾಯತ್ ಒಟ್ಟು 40 ಸದಸ್ಯರ ಬಲ ಹೊಂದಿದ್ದು, ಜೆಡಿಎಸ್‌ನಿಂದ 23, ಕಾಂಗ್ರೆಸ್‌ನಿಂದ 16, ಬಿಜೆಪಿಯಿಂದ ಒಬ್ಬರು ಸದಸ್ಯರು ಆಯ್ಕೆಯಾಗಿದ್ದಾರೆ. ಸಾಮಾನ್ಯ ಸಭೆ ನಡೆಯಲು ಕನಿಷ್ಠ 20 ಸದಸ್ಯರು ಹಾಜರಿರುವುದು ಕಡ್ಡಾಯವಾಗಿದೆ.
ಆದರೆ ಭವಾನಿ ರೇವಣ್ಣ ಸೇರಿದಂತೆ ಜೆಡಿಎಸ್‌ನ 23 ಜನ ಸದಸ್ಯರು, ಬೆಜೆಪಿಯ ಒಬ್ಬ ಸದಸ್ಯ ಸಾಮಾನ್ಯ ಸಭೆಗೆ ಗೈರಾಗಿದ್ದರಿಂದ ಇಂದಿನ ಸಾಮಾನ್ಯ ಸಭೆಯನ್ನು ಮುಂದೂಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿ.ಪಂ. ಅಧ್ಯಕ್ಷೆ ಶ್ವೇತಾ ದೇವರಾಜ್ ಜಿಲ್ಲಾ ಪಂಚಾಯತ್ ಸದಸ್ಯರ ಕೆಲವೊಂದು ಅನುದಾನವನ್ನು ಶಾಸಕರೇ ಬಳಸಿಕೊಳ್ಳುತ್ತಿದ್ದು, ಈ ಬಗ್ಗೆ ನಾವು ಪ್ರತಿಭಟಿಸಬಹುದು ಎಂದು ಜೆಡಿಎಸ್ನವರು ಸಭೆಗೆ ಗೈರಾಗಿದ್ದಾರೆ. ಒಟ್ಟಾರೆ ಜೆಡಿಎಸ್ ಮತ್ತು ಕಾಂಗ್ರೆಸ್ ಜಗಳಕ್ಕೆ ಅಭಿವೃದ್ಧಿ ಕಾರ್ಯ ಸರಿಯಾಗಿ ಆಗುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆಂದು ತಿಳಿಸಿದರು.