ಹಾಸನ: ಅಕ್ರಮ ಮರಳು ಸಾಗಾಣಿಕೆ ವಿರುದ್ಧ ದಾಖಲಾಗಿದ್ದ ಪ್ರಕರಣದ ಹಿನ್ನೆಲೆ ಬಿಜೆಪಿ ಜಿಲ್ಲಾಧ್ಯಕ್ಷ ಪೊಲೀಸ್ ಠಾಣೆಗೆ ಬಂದು ಗಲಾಟೆ ಮಾಡಿರುವ ಆರೋಪ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಕೇಳಿ ಬಂದಿದೆ.
ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲ್ಲಹಳ್ಳಿ ಸುರೇಶ್ ಬೆಂಬಲಿಗರು ಎನ್ನಲಾದ ಬೇಲೂರು ತಾಲೂಕು ಅಧ್ಯಕ್ಷ ಅಡಗೂರು ಆನಂದ್, ರೌಡಿಶೀಟರ್ಗಳಾದ ಮಧು ಬಿರಾಡವಳ್ಳಿ, ಭರತ್ ಮತ್ತು ಇತರರು ಬೇಲೂರು ತಾಲೂಕು ಅರೇಹಳ್ಳಿ ಪೊಲೀಸ್ ಠಾಣೆಗೆ ಬಂದು ಠಾಣೆಯ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಮರಳು ಮಾಫಿಯಾ ವಿರುದ್ಧ ನಮ್ಮ ಪಕ್ಷದವರ ಮೇಲೆ ಪ್ರಕರಣ ದಾಖಲಿಸುತ್ತೀರಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ನಮ್ಮ ವಿರುದ್ಧ ಪ್ರಕರಣ ದಾಖಲಿಸಿದರೆ ಠಾಣೆಯ ಪಿಎಸ್ಐಯನ್ನು ಎತ್ತಂಗಡಿ ಮಾಡಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.
ಏನಿದು ಪ್ರಕರಣ: ರೌಡಿಶೀಟರ್ ಮಧುಕುಮಾರ್ ವಿರುದ್ಧ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದಾರೆಂಬ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಮಧು ಜಿಲ್ಲೆಯ ಬಿಜೆಪಿಯ ಅಧ್ಯಕ್ಷ ಹುಲ್ಲಹಳ್ಳಿ ಸುರೇಶ್ ಬಲಗೈ ಬಂಟ ಎನ್ನಲಾಗಿದೆ. ಅಷ್ಟಲ್ಲದೆ ಬಿಜೆಪಿ ಕಾರ್ಯಕರ್ತ ಎಂದೂ ಹೇಳಲಾಗುತ್ತಿದೆ. ಹೀಗಾಗಿ ಈತನ ವಿರುದ್ಧ ಪ್ರಕರಣ ದಾಖಲು ಮಾಡಿದ್ದ ಹಿನ್ನೆಲೆ ಜಿಲ್ಲಾಧ್ಯಕ್ಷ ಹುಲ್ಲಹಳ್ಳಿ ಸುರೇಶ್ ಇಪ್ಪತ್ತಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ಬಂದು ಪೊಲೀಸ್ ಠಾಣೆಯಲ್ಲಿ ಗಲಾಟೆ ಮಾಡಿ ನಮ್ಮ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು ಮಾಡಬಾರದು ಎಂದು ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.