ಹಾಸನ: ಡೈರಿ ಸ್ಥಳಾಂತರ ವಿಚಾರವಾಗಿ ಮೊನ್ನೆ ಎರಡು ಕೋಮಿನ ಮಧ್ಯೆ ಮಾರಾಮಾರಿ ನಡೆದಿದ್ದು, ಕೊನೆಗೆ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿತ್ತು. ಪ್ರಕರಣದ ಹಿನ್ನೆಲೆಯಲ್ಲಿ ಶಂಖ ಗ್ರಾಮದ ಡೈರಿ ಹಾಲನ್ನು ಸ್ವೀಕರಿಸುವುದಿಲ್ಲ ಎಂದು ಪಟ್ಟು ಹಿಡಿದ ಹಾಸನ ಹಾಲು ಒಕ್ಕೂಟಕ್ಕೆ ಬೇಸತ್ತು ಗ್ರಾಮಸ್ಥರು ಶೇಖರಣೆ ಮಾಡಿದ ಹಾಲನ್ನು ಒಕ್ಕೂಟದ ಎದುರು ಇಟ್ಟು ಪ್ರತಿಭಟನೆ ನಡೆಸಿದ್ರು.
ಡೈರಿ ಕಚೇರಿ ವರ್ಗಾವಣೆ ಮಾಡುವ ಸಂದರ್ಭದಲ್ಲಿ ಮಹಿಳೆಯರ ಜೊತೆ ಚರ್ಚೆ ನಡೆಸುತ್ತಿದ್ದ ಸುನೀಲ್ ಎಂಬ ಸಹಕಾರ ಸಂಘದ ವಿಶೇಷ ಅಧಿಕಾರಿ ಸೇರಿದಂತೆ 8-10 ಮಂದಿಗೆ ಪಕ್ಷವೊಂದರ ಬೆಂಬಲಿಗರು ಎನ್ನಲಾದ ಕಿಡಿಗೇಡಿಗಳು ಹಲ್ಲೆ ಮಾಡಿದ್ದರು. ಇದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ರೇವಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಪ್ರಕರಣ ಬಳಿಕ ಆ ಗ್ರಾಮದಲ್ಲಿ ಶೇಖರಣೆ ಮಾಡುವ ಹಾಲು ಒಕ್ಕೂಟಕ್ಕೆ ಬೇಡ ಎಂದು ಅಧಿಕಾರಿಗಳು ನೀಡಿದ ಹೇಳಿಕೆಗೆ ಗ್ರಾಮಸ್ಥರು ಒಕ್ಕೂಟದ ಮುಂದೆ ಹಾಲಿನ ಕ್ಯಾನ್ ಗಳನ್ನು ಇಟ್ಟು ಪ್ರತಿಭಟನೆ ಮಾಡಲು ಮುಂದಾದ್ರು. ಇದಕ್ಕೆ ಬಿಜೆಪಿ ಪಕ್ಷದ ಕಾರ್ಯಕರ್ತರು ಬೆಂಬಲ ಸೂಚಿಸಿದ್ರು. ಇದರಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಬಹುದೆಂಬ ಕಾರಣಕ್ಕೆ ಹಾಸನ ಹಾಲು ಒಕ್ಕೂಟದ ಮುಂದೆ ಬಿಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿತ್ತು. ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ರು.
ರಾಜಕೀಯ ತಿರುವು ಪಡೆದ ಡೈರಿ ಪ್ರಕರಣ :
ಪ್ರತಿನಿತ್ಯ ರಾತ್ರಿ 8 ಗಂಟೆಗೆ ಗ್ರಾಮಕ್ಕೆ ಹಾಲಿನ ವಾಹನ ಬರುತ್ತಿತ್ತು. ಆದ್ರೆ ಮೊನ್ನೆಯಿಂದ ಬಾರದ ಕಾರಣ ಗ್ರಾಮಸ್ಥರೇ ಖಾಸಗಿ ವಾಹನದಲ್ಲಿ ಶೇಖರಣೆಯಾದ ಹಾಲನ್ನು ತಂದು ಹಾಲಿನ ಕ್ಯಾನ್ ಗಳನ್ನು ಒಕ್ಕೂಟದ ಮುಂಭಾಗವೇ ಇಟ್ಟು ಪ್ರತಿಭಟನೆ ಮಾಡಿದ್ರು. ಹಾಲನ್ನು ಒಕ್ಕೂಟದೊಳಗೆ ತೆಗೆದುಕೊಳ್ಳದ ಕಾರಣ, ಸ್ಥಳಕ್ಕೆ ಬಂದ ಬಿಜೆಪಿ ಕಾರ್ಯಕರ್ತರು ಹಾಲು ತೆಗೆದುಕೊಳ್ಳದ ಅಧಿಕಾರಿಗಳ ವಿರುದ್ಧ ಮಾತಿಗೆ ಇಳಿದರು. ಬೇರೆ ಭಾಗದ ಹಾಲಿನ ವಾಹನವನ್ನು ಒಕ್ಕೂಟದ ಒಳಗೆ ಹೋಗದಂತೆ ಗ್ರಾಮಸ್ಥರು ತಡೆದಿದ್ದರಿಂದ ಪರಿಸ್ಥಿತಿ ನಿಯಂತ್ರಣ ಮಾಡಲು ಪೊಲೀಸರು ಹರಸಾಹಸ ಮಾಡಿದ್ರು.
ಈಟಿವಿ ಭಾರತಕ್ಕೆ ಧನ್ಯವಾದ ಹೇಳಿದ ಗ್ರಾಮಸ್ಥರು:
ಹಲ್ಲೆಗೊಳಗಾದ ವಿಶೇಷ ಅಧಿಕಾರಿ ವಿ.ಸುನೀಲ್ ಸ್ಥಳಕ್ಕಾಗಮಿಸಿದ ಬಳಿಕ ಒಕ್ಕೂಟದ ಅಧಿಕಾರಿಗಳೊಂದಿಗೆ ಚರ್ಚಿಸಿ, ಶೇಖರಣೆಯಾದ ಹಾಲನ್ನು ಪಡೆಯುವುದಾಗಿ ಒಪ್ಪಿಕೊಂಡ್ರು. ನಿನ್ನೆ ಕೂಡಾ ಶಂಖಾ ಗ್ರಾಮದ ಪ್ರಕರಣವನ್ನು ಎಳೆ ಎಳೆಯಾಗಿ ಈಟಿವಿ ಭಾರತ ಪ್ರಕಟಿಸಿತ್ತು. ಇಂದು ಕೂಡಾ ನೊಂದ ಹಾಲು ಉತ್ಪಾದಕರ ಸಮಸ್ಯೆಗೆ ಸ್ಪಂದಿಸಿದ್ದರಿಂದ ಗ್ರಾಮಸ್ಥರು ಈಟಿವಿ ಭಾರತಕ್ಕೆ ಧನ್ಯವಾದ ಸಮರ್ಪಿಸಿದ್ರು. ಒಟ್ಟಾರೆ, ಹಾಲಿನ ಡೈರಿ ಕಟ್ಟಡ ಸ್ಥಳಾಂತರ ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿತ್ತು. ಈಟಿವಿ ವರದಿಯಿಂದ ಶಂಖ ಗ್ರಾಮದ ಪ್ರಕರಣಕ್ಕೆ ತಾತ್ಕಾಲಿಕ ಪರಿಹಾರ ಸಿಕ್ಕಿದೆ.