ಹಾಸನ: ಅನಾರೋಗ್ಯದ ಹಿನ್ನೆಲೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪದ್ಮಶ್ರೀ ಸಾಲು ಮರದ ತಿಮ್ಮಕ್ಕ ಅವರನ್ನು ಜಿಲ್ಲಾಧಿಕಾರಿ ಆರ್.ಗಿರೀಶ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಹೊಟ್ಟೆನೋವು ಹಾಗೂ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿರುವ ಸಾಲು ಮರದ ತಿಮ್ಮಕ್ಕ ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸಿದರು. ಸಮಾಜಕ್ಕೆ ವೃಕ್ಷಮಾತೆಯ ಕೊಡುಗೆ ಅಪಾರವಾಗಿದೆ. ಇವರ ಆರೋಗ್ಯ ಸೇವೆಗೆ ಜಿಲ್ಲಾಡಳಿತ ಸದಾ ಸಿದ್ಧವಿರುತ್ತದೆ. ಅವರ ಅರೋಗ್ಯ ಸುಧಾರಣೆಗೆ ವಿಶೇಷ ಗಮನ ಹರಿಸುವಂತೆ ಆಸ್ಪತ್ರೆ ಮುಖ್ಯಸ್ಥರಾದ ಡಾ. ಮಣಿ ಅವರಿಗೆ ತಿಳಿಸಿದರು.
ಈ ವೇಳೆ ತಿಮ್ಮಕ್ಕ ಅವರ ದತ್ತು ಪುತ್ರ ಉಮೇಶ್ ಬಳ್ಳೂರು, ತಿಮ್ಮಕ್ಕ ಅವರು ಚೇತರಿಕೆಯಾದ ನಂತರ ಬಳ್ಳೂರು ಗ್ರಾಮದಲ್ಲಿ ವಾಸ್ತವ್ಯ ಮಾಡಲಿದ್ದು, ಅಜ್ಜಿಯ ಆರೋಗ್ಯದಲ್ಲಿ ಆಗಾಗ ಏರುಪೇರು ಆಗುವ ಕಾರಣ ಇವರ ಆರೋಗ್ಯ ಸ್ಥಿತಿಗತಿಗಳ ಬಗ್ಗೆ ವಿಚಾರಿಸಲು ಜಿಲ್ಲಾಡಳಿತದಿಂದ ಒಬ್ಬ ತಜ್ಞ ವೈದ್ಯರನ್ನು ನೇಮಿಸಿಕೊಡುವಂತೆ ಜಿಲ್ಲಾಧಿಕಾರಿಯವರಲ್ಲಿ ಮನವಿ ಮಾಡಿದರು.
ಈ ಬಗ್ಗೆ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೂಚನೆ ನೀಡಿ, ಅಗತ್ಯ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಹೇಳಿದರು. ಸದ್ಯಕ್ಕೆ ತಿಮ್ಮಕ್ಕ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ಉಮೇಶ್ ತಿಳಿಸಿದರು.