ಹಾಸನ : ಜಿಲ್ಲೆಯಲ್ಲಿ ಹೊಸ 11 ಸೋಂಕಿತ ಪ್ರಕರಣ ಪತ್ತೆಯಾಗಿವೆ. ಇದರಿಂದಾಗಿ ಒಟ್ಟು 237 ಕೊರೊನಾ ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾಹಿತಿ ನೀಡಿದ ಅವರು, ಮತ್ತೆ 11 ಪ್ರಕರಣ ಸೇರಿ ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 237ಕ್ಕೆ ಏರಿದೆ. ಇದರಲ್ಲಿ 184 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಓರ್ವ ಸೋಂಕಿತ ಮೃತಪಟ್ಟಿದ್ದಾರೆ ಎಂದರು.
ಪ್ರಸ್ತುತ 52 ಮಂದಿ ಸೋಂಕಿತರನ್ನು ಕೋವಿಡ್-19 ಆಸ್ಪತ್ರೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶನಿವಾರದಂದು ಪತ್ತೆಯಾದ ಸೋಂಕಿತರಲ್ಲಿ 7 ಮಂದಿ ಚೆನ್ನರಾಯಪಟ್ಟಣ ಹಾಗೂ ಒಬ್ಬರು ಹೊಳೆನರಸೀಪುರ ತಾಲೂಕಿಗ ಸೇರಿದವರಾಗಿದ್ದಾರೆ. ಎಲ್ಲರೂ ಮುಂಬೈನಿಂದ ಪ್ರಯಾಣ ಬೆಳೆಸಿದ ಹಿನ್ನೆಲೆ ಹೊಂದಿದ್ದಾರೆ ಎಂದರು.
ಇದಲ್ಲದೆ ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದ ಬೇಲೂರು ಹಾಗೂ ಹಾಸನದ ತಲಾ ಒಬ್ಬರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಅರಕಲಗೂಡು ತಾಲೂಕಿನ 5 ವರ್ಷದ ಮಗುವಿನಲ್ಲೂ ಸೋಂಕು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದರು.