ಹಾಸನ: ಒಂಬತ್ತು ಶತಮಾನದಷ್ಟು ಹಳೆಯದಾದ ದೊಡ್ಡಕೆರೆ ರಾಷ್ಟ್ರಕೂಟರ ದೊರೆ ಧ್ರುವ ಎಂಬವನು ಈ ಕೆರೆಯನ್ನು ಕಟ್ಟಿಸಿದ್ದು, ಆದರೆ ಇದನ್ನು ಇಂದಿನ ಅಧಿಕಾರಿಗಳು ಸಂರಕ್ಷಣೆ ಮಾಡುವಲ್ಲಿ ಎಡವಿದ್ದು ಕೆರೆ ಈಗ ಅಳಿವಿನಂಚಿನಲ್ಲಿದೆ.
ಜಿಲ್ಲೆ ಸುಪ್ರಸಿದ್ಧ ಬೇಲೂರು ತಾಲೂಕಿನ ಹಳೇಬೀಡು ಗ್ರಾಮದ ದ್ವಾರಸಮುದ್ರ ಕೆರೆಯನ್ನು ಕಟ್ಟಿಸಿದ್ದು ರಾಷ್ಟ್ರಕೂಟರ ದೊರೆ. ಇತಿಹಾಸ ಹೊಂದಿರುವ ಕೆರೆ ಕಳೆದ 12 ವರ್ಷಗಳಿಂದ ತೀವ್ರ ಬರಗಾಲಕ್ಕೆ ತುತ್ತಾಗಿ ಕೆರೆ ಬಣಗುಡುತ್ತಿತ್ತು. ಬಳಿಕ ಬೇಲೂರಿನ ಯಗಚಿ ಜಲಾಶಯದಿಂದ ರಣಘಟ್ಟ ಯೋಜನೆಯ ಮೂಲಕ ಹಳೇಬೀಡು ಸೇರಿದಂತೆ 15 ಕೆರೆಗಳನ್ನು ತುಂಬಿಸಬೇಕು ಎಂದು ಈ ಭಾಗದ ರೈತರು ಪ್ರತಿಭಟನೆ ಮಾಡಿದ್ದರು.
ಪ್ರತಿಭಟನೆ ತೀವ್ರ ಸ್ವರೂಪ ಪಡೆದು ಪಟ್ಟು ಬಿಡದ ರೈತರು ತಲೆಯ ಮೇಲೆ ತುತ್ತಿನ ಬುಟ್ಟಿಯನ್ನು ಹೊತ್ತು ವಿಧಾನಸೌಧದ ಮುಂದೆ ಕುಳಿತು ಪ್ರತಿಭಟನೆ ಮಾಡಿದರು. ಅಷ್ಟೇ ಅಲ್ಲ, ಹಾಸನ ಮತ್ತು ಚಿಕ್ಕಮಗಳೂರು ನಡುವಿನ ರಸ್ತೆಯನ್ನು ಬಂದ್ ಮಾಡಿ ನಂತರ ರೈತರೇ ಸ್ವಯಂಪ್ರೇರಿತವಾಗಿ ಮಲ್ಲಿಕಾರ್ಜುನಪುರದ ಸಮೀಪ ನೀರಿಗಾಗಿ ಕಾಲುವೆ ತೆಗೆದು ನೀರು ಹರಿಸಲು ಮುಂದಾದಾಗ ಸರ್ಕಾರ ರೈತರ ಮೇಲೆ ಪ್ರಕರಣ ದಾಖಲಿಸಿ ರೈತರನ್ನ ಮತ್ತಷ್ಟು ಕೆರಳುವಂತೆ ಮಾಡಿದ್ದರು.
ಕೊನೆಗೂ ಈ ಭಾಗಕ್ಕೆ ನೀರು ಹರಿಸುವ ಉದ್ದೇಶದಿಂದ ಹಿಂದಿನ ಕುಮಾರಸ್ವಾಮಿಯವರ ಮೈತ್ರಿ ಸರ್ಕಾರದಲ್ಲಿ ರಣಘಟ್ಟ ಯೋಜನೆ ಮುಖಾಂತರ ಹಳೇಬೀಡು ಕೆರೆಗೆ ನೀರು ಹರಿಸುವ ಉದ್ದೇಶದಿಂದ 100 ಕೋಟಿ ಅನುದಾನವನ್ನು ಮೀಸಲಿಟ್ಟಿತ್ತು. ಬಳಿಕ ಬಂದ ಬಿಜೆಪಿ ಸರ್ಕಾರ ಮುಂದುವರೆಸುವ ಕಾರಣ ರೈತರು ಮತ್ತೆ ಪ್ರತಿಭಟನೆಗೆ ಹಿಡಿಯುವ ಸಂದರ್ಭದಲ್ಲಿ ಕಳೆದ 3-4 ತಿಂಗಳಿನಿಂದ ಸತತವಾಗಿ ಸುರಿದ ಮಳೆಯಿಂದ ಸದ್ಯ ದ್ವಾರಸಮುದ್ರ ಕೆರೆ ಮೈದುಂಬಿ ಹರಿಯುತ್ತಿದೆ. ಇದರಿಂದಾಗಿ ಈ ಭಾಗದ ಜನರನ್ನು ಸಂಕಷ್ಟವನ್ನು ದೂರ ಮಾಡಿದೆ ಎನ್ನುವಷ್ಟರಲ್ಲಿ ಈಗ ಅದೇ 9 ಶತಮಾನದ ಕೆರೆ ಈಗ ಇಬ್ಭಾಗವಾಗುವ ಸನಿಹಕ್ಕೆ ತಲುಪುತ್ತಿದೆ.
ಹಳೇಬಿಡಿನ ದ್ವಾರಸಮುದ್ರ ಕೆರೆ ಸುಮಾರು 250 ಎಕರೆ ಪ್ರದೇಶದಲ್ಲಿದ್ದು, ಈ ಕೆರೆ ತುಂಬಿದರೆ ಹಳೇಬೀಡು ಸೇರಿದಂತೆ ಜಾವಗಲ್ ಮತ್ತು ಬೆಳವಾಡಿಯ ಭಾಗಕ್ಕೂ ನೀರನ್ನ ಕೊಂಡೊಯ್ಯಬಹುದು. ಇದರ ಜೊತೆಗೆ ಕೆರೆಯನ್ನೇ ನಂಬಿಕೊಂಡಿರುವ ಮಾಯಗೊಂಡನಹಳ್ಳಿ, ಕೆರೆಕಟ್ಟೆಹಳ್ಳಿ, ಚಟಚಟಹಳ್ಳಿ, ಹೊಸೂರು, ರಾಮೇನಹಳ್ಳಿ, ರಾಜನಶಿರಿಯೂರು ಸೇರಿದಂತೆ 15 ಗ್ರಾಮಗಳು ಈ ಕೆರೆಯ ನೀರನ್ನೇ ನಂಬಿಕೊಂಡು ಕೃಷಿ ಚಟುವಟಿಕೆ ಮೂಲಕ ಬದುಕು ಕಟ್ಟಿಕೊಂಡಿದ್ದರು. ಆದರೆ ಇವತ್ತು ಕೆರೆ ಭಾಗವಾದರೆ ಗ್ರಾಮಗಳು ಕೂಡ ಮುಳುಗಡೆಯಾಗುವ ಸಂಭವವಿದೆ.
ಕೆರೆಯ ಅವನತಿಗೆ ಸರ್ಕಾರ ಮತ್ತು ಲೋಕೋಪಯೋಗಿ ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳೇ ನೇರ ಹೊಣೆ. 2013ರಿಂದ ಪ್ರಾರಂಭವಾದ ಎತ್ತಿನಹೊಳೆ ಕಾಮಗಾರಿ ಈ ಭಾಗದಲ್ಲಿ ನಡೆಯುತ್ತಿದ್ದು, ಕೆರೆಯ ಮುಖಾಂತರವೇ ಭಾರಿ ಪ್ರಮಾಣದ ವಸ್ತುಗಳನ್ನು ಸಾಗಿಸಲು ದೊಡ್ಡ ದೊಡ್ಡ ವಾಹನಗಳು ಸಂಚಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ಈಗ ಕೆರೆಯ ಏರಿ ಭಾಗವಾಗಲು ಪ್ರಮುಖ ಕಾರಣ ಎನ್ನುವುದು ಸ್ಥಳೀಯರ ಆರೋಪ. 12 ವರ್ಷಗಳ ಬಳಿಕ ತುಂಬಿದ ಕೆರೆಗೆ 12 ದಿನದ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಬಾಗಿನ ಅರ್ಪಿಸಿದ್ದರು.
ಈಗಾಗಲೇ ಹಳೇಬೀಡು ಗ್ರಾಮದಲ್ಲಿ ಸ್ವಯಂಪ್ರೇರಿತವಾಗಿ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿದ್ದು, ರಸ್ತೆಯ ಮಧ್ಯೆ ಅಡುಗೆ ಮಾಡುವ ಮೂಲಕ ರೈತ ಸಂಘಟನೆಗಳು ಮತ್ತು ಸ್ಥಳೀಯರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಪ್ರತಿಭಟನೆ ನಡೆಯುತ್ತಿರುವ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಸಂಬಂಧಪಟ್ಟವರು ಸ್ಥಳಕ್ಕಾಗಮಿಸಿ ಕೆರೆಯನ್ನು ಕೂಡಲೇ ದುರಸ್ತಿ ಪಡಿಸುವ ಕಾರ್ಯಕ್ಕೆ ಆದೇಶ ನೀಡಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಉಗ್ರ ಹೋರಾಟ ಮಾಡಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.