ಸಕಲೇಶಪುರ : ಅಂತ್ಯೋದಯ ಹಾಗೂ ಬಿಪಿಎಲ್ ಪಡಿತರ ಫಲಾನುಭವಿಗಳಿಗೆ ಸರ್ಕಾರ ನೀಡಿದ ಅಕ್ಕಿಯನ್ನು ಸರಿಯಾಗಿ ವಿತರಣೆ ಮಾಡದೆ ವಂಚನೆ ಮಾಡಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ತಾಲೂಕಿನ ಕುಂಬರಡಿ ಗ್ರಾಮದ ನ್ಯಾಯಬೆಲೆ ಅಂಗಡಿ ಮಾಲೀಕರೊಬ್ಬರ ಮೇಲೆ ದೂರು ದಾಖಲಾಗಿದೆ.
ತಾಲೂಕಿನ ಕುಂಬರ್ಡಿ ಗ್ರಾಮದ ಸದಾಶಿವ ಅವರ ಮನೆಯಲ್ಲಿ ಬಡವರಿಗೆ ನೀಡಬೇಕಿದ್ದ ಸುಮಾರು 485 ಕೆಜಿ ಅಕ್ಕಿ ಪತ್ತೆಯಾಗಿದ್ದು, ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೋವಿಡ್-19 ಲಾಕ್ಡೌನ್ನಿಂದಾಗಿ ಯಾರೂ ಸಹ ಹಸಿವಿನಿಂದ ಬಳಲಬಾರದು ಎಂದು ಸರ್ಕಾರ ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಕಾರ್ಡ್ ಹೊಂದಿರುವವರಿಗೆ ಎರಡು ತಿಂಗಳ ಅಕ್ಕಿಯನ್ನು ಏಪ್ರಿಲ್ನಲ್ಲಿ ವಿತರಣೆ ಮಾಡಿದೆ.
ಅಂತ್ಯೋದಯ ಪಡಿತರ ಕಾರ್ಡ್‌ಗೆ ತಿಂಗಳಿಗೆ 35 ಕೆಜಿಯಂತೆ 2 ತಿಂಗಳಿಗೆ 70 ಕೆಜಿ ಅಕ್ಕಿ, ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಪ್ರತಿ ಸದಸ್ಯರಿಗೆ ತಿಂಗಳಿಗೆ 5 ಕೆಜಿಯಂತೆ 2 ತಿಂಗಳಿಗೆ 10 ಕೆಜಿ ನೀಡಬೇಕು. ಆದರೆ, ಈ ನ್ಯಾಯಬೆಲೆ ಅಂಗಡಿಯಲ್ಲಿ 70 ಕೆಜಿ ನೀಡದೆ 30 ರಿಂದ 50 ಕೆಜಿವರೆಗೆ ಮಾತ್ರ ನೀಡಿ ಬಡವರಿಗೆ ಮೋಸ ಮಾಡಲಾಗುತ್ತಿದೆ ಎಂದು ಗ್ರಾಮ ಪಂಚಾಯತ್ ಸದಸ್ಯ ರಘುನಂದನ್ ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಹಾಗೂ ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕಿ ಸವಿತಾ ಅವರಿಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಅಧಿಕಾರಿಗಳು ಸುಮಾರು 30 ಮಂದಿ ಅಂತ್ಯೋದಯ ಹಾಗೂ ಬಿಪಿಎಲ್ ಫಲಾನುಭವಿಗಳ ಮನೆಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಹುತೇಕ ಕಾರ್ಡುದಾರರು ಸರ್ಕಾರ ನಿಗದಿಗೊಳಿಸಿರುವುದಕ್ಕಿಂತ ಕಡಿಮೆ ಅಕ್ಕಿ ನೀಡಿರುವ ವರದಿ ನೀಡಿದರು. ಈ ಹಿನ್ನೆಲೆಯಲ್ಲಿ ನ್ಯಾಯಬೆಲೆ ಅಂಗಡಿಗೆ ತೆರಳಿ ಪರಿಶೀಲನೆ ನಡೆಸಿದಾಗ ಮನೆಯ ಕೋಣೆಯಲ್ಲಿ ಪಡಿತರ ಅಕ್ಕಿ ದಾಸ್ತಾನು ಇರುವುದು ಪತ್ತೆಯಾಗಿದೆ.
29 ಎಸ್‌ಕೆಪಿಪಿ 3 ಸಕಲೇಶಪುರ ತಾಲೂಕಿನ ಕುಂಬರ್ಡಿ ಗ್ರಾಮದಲ್ಲಿ ಅಕ್ರಮವಾಗಿ ಅಕ್ಕಿ ದಾಸ್ತಾನಿಟ್ಟುಕೊಂಡ ಆರೋಪದ ಮೇಲೆ ಅಕ್ಕಿ ವಶಪಡಿಸಿಕೊಳ್ಳಲಾಯಿತು. ಈ ಕುರಿತು ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.