ಸಕಲೇಶಪುರ (ಹಾಸನ): ಅಧಿಕಾರ ವಿಕೇಂದ್ರೀಕರಣದಿಂದ ಗ್ರಾಮಗಳು ಹೆಚ್ಚಿನ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಶಾಸಕ ಹೆಚ್.ಕೆ. ಕುಮಾರಸ್ವಾಮಿ ಹೇಳಿದರು.
ತಾಲೂಕಿನ ಹಾನುಬಾಳ್ ಗ್ರಾಮದ ಗ್ರಾಮ ಪಂಚಾಯತಿ ಕಚೇರಿ ಆವರಣದಲ್ಲಿ ಡಿಜಿಟಲ್ ಗ್ರಂಥಾಲಯ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಇವತ್ತು ಗ್ರಾ.ಪಂ. ಗಳಿಗೆ ಹೆಚ್ಚಿನ ಅನುದಾನ ನೀಡುತ್ತಿದೆ. ಅಧಿಕಾರ ವಿಕೇಂದ್ರೀಕರಣದಿಂದ ಕೇಂದ್ರ ಸರ್ಕಾರವೇ ಇಂದು ನೇರವಾಗಿ ಇಲ್ಲಿಗೆ ಅನುದಾನವನ್ನು ನೀಡುತ್ತಿದೆ. ಇದರಿಂದಾಗಿ ಪಂಚಾಯತಿಗಳು ಹೆಚ್ಚಿನ ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ. ಹಾನುಬಾಳ್ ಗ್ರಾ.ಪಂ. ವ್ಯಾಪ್ತಿಯಲ್ಲಿ ಡಿಜಿಟಲ್ ಗ್ರಂಥಾಲಯದ ಜೊತೆಗೆ ರೈತ ಸಂಪರ್ಕ ಕೇಂದ್ರ, ಅಂಬೇಡ್ಕರ್ ಭವನವನ್ನು ಸಹ ಉದ್ಘಾಟನೆ ಮಾಡಲಾಗಿದ್ದು, ಜೊತೆಗೆ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ ಎಂದರು.
ಮಾಜಿ ಶಾಸಕ ಹೆಚ್.ಎಂ. ವಿಶ್ವನಾಥ್ ಮಾತನಾಡಿ, ತಾಲೂಕಿನಲ್ಲಿ ಕೆಲವು ಅಧಿಕಾರಿಗಳು ಗುತ್ತಿಗೆದಾರರಿಂದ ಕೆಲಸ ತೆಗೆಯುವ ಬದಲು ಬೇನಾಮಿ ಹೆಸರಿನಲ್ಲಿ ಗುತ್ತಿಗೆ ಮಾಡುತ್ತಿದ್ದಾರೆ. ಇದು ಸರಿಯಲ್ಲ, ಸರ್ಕಾರಿ ಅಧಿಕಾರಿಗಳು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು. ಇತ್ತೀಚಿಗೆ ಸರಳ ಸ್ವಭಾವದ ಶಾಸಕರು ಭ್ರಷ್ಟ ಅಧಿಕಾರಿಗಳನ್ನು ಜಾಡಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಈ ಸಂಧರ್ಭದಲ್ಲಿ ಜಿ.ಪಂ. ಸದಸ್ಯ ಸುಪ್ರದೀಪ್ತ ಯಜಮಾನ್, ತಾ.ಪಂ. ಅಧ್ಯಕ್ಷೆ ಶ್ವೇತಾ ಪ್ರಸನ್ನ, ಗ್ರಾ.ಪಂ. ಅಧ್ಯಕ್ಷೆ ಸುಲೋಚನಾ, ಉಪಾಧ್ಯಕ್ಷೆ ಕುಸುಮ ಭೂಪಾಲ್, ಕಾಂಗ್ರೆಸ್ ತಾಲೂಕು ಅಧ್ಯಕ್ಷ ಭಾಸ್ಕರ್, ಹಾನುಬಾಳ್ ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ರಾಜೀವ್, ಸಾಹಿತಿ ಕೃಷ್ಣ, ಇಓ ಹರೀಶ್, ಉಪ ತಹಶೀಲ್ದಾರ್ ಕೃಷ್ಣಮೂರ್ತಿ, ಪಿಡಿಓ ಹರೀಶ್ ಸೇರಿದಂತೆ ಇತರರು ಹಾಜರಿದ್ದರು.