ಹಾಸನ: ಸಮಾಜ ಕಲ್ಯಾಣ ಇಲಾಖೆಯಿಂದ ಅಪ್ರಾಪ್ತ ಅತ್ಯಾಚಾರ ಸಂತ್ರಸ್ತೆಗೆ ಬಂದಿದ್ದ ಪರಿಹಾರ ಹಣವನ್ನು ದಲಿತ ಮುಖಂಡ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಲಪಟಾಯಿಸಿದ್ದು, ಮೋಸಕ್ಕೊಳಗಾಗಿರುವ ಸಂತ್ರಸ್ತೆ ಈಗ ಪೊಲೀಸರ ಮೊರೆ ಹೋಗಿದ್ದಾಳೆ.
ಹೊಳೆನರಸೀಪುರ ತಾಲೂಕಿನ ಹಳ್ಳಿಯೊಂದರ ಪರಿಶಿಷ್ಟ ಪಂಗಡದ ಬಾಲಕಿ ಮೇಲೆ 2019ರ ಜೂನ್ 6ರಂದು ಅತ್ಯಾಚಾರ ನಡೆದಿತ್ತು. ಈ ಸಂಬಂಧ ಹೊಳೆನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಆದರೆ ಸಂತ್ರಸ್ತೆಗೆ ಬಿಡುಗಡೆಯಾಗಿದ್ದ 3.75 ಲಕ್ಷ ರೂ.ಗಳಲ್ಲಿ 2.10 ಲಕ್ಷ ರೂಪಾಯಿಯನ್ನು ಹಾಸನ ತಾಲೂಕು ಕಟ್ಟಾಯ ಹೋಬಳಿ ಬಾಗನಹಳ್ಳಿ ಗ್ರಾಮದ ಮಂಜುನಾಥ್ ಎಂಬಾತ ಲಪಟಾಯಿಸಿಕೊಂಡು ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.
ಅತ್ಯಾಚಾರಕ್ಕೊಳಗಾದ ಬಾಲಕಿ ಅನಾಥೆಯಾಗಿದ್ದು, ದೂರದ ಸಂಬಂಧಿಕರ ಆಶ್ರಯದಲ್ಲಿ ಬೆಳೆಯುತ್ತಿದ್ದಾಳೆ. ಬಾಲಕಿಗೆ ಅನ್ಯಾಯ ಆಗಿರುವ ವಿಚಾರ ತಿಳಿದ ಮಂಜುನಾಥ್ ಮನೆಗೆ ಭೇಟಿ ನೀಡಿ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾನೆ. ಆತನ ಮೋಸದ ಬುದ್ದಿ ಅರಿಯದ ಬಾಲಕಿ ಕುಟುಂಬಸ್ಥರು ನಂಬಿದ್ದಾರೆ. ಸಮಾಜ ಕಲ್ಯಾಣ ಇಲಾಖೆಗೆ ಎಲ್ಲ ದಾಖಲೆ ಪತ್ರಗಳನ್ನು ಹೊಂದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಂಜುನಾಥ್, ಅವರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದಾನೆ. ಅತ್ಯಾಚಾರ ಪ್ರಕರಣ ಬಳಿಕ ಹಾಸನ ಪುನರ್ವಸತಿ ಕೇಂದ್ರಕ್ಕೆ ಸೇರಿಸುವ ಬದಲು ಗಾರ್ಮೆಂಟ್ಸ್ ಫ್ಯಾಕ್ಟರಿಗೆ ಬಾಲಕಿಯನ್ನು ಸೇರಿಸಿದ್ದ ಎನ್ನಲಾಗಿದೆ.
ಬಾಲಕಿಗೆ ಪರಿಹಾರ ಬರುತ್ತದೆ ಎಂಬ ಖಚಿತತೆ ಮೇರೆಗೆ ಮಂಜುನಾಥ್ ಸಮಾಜ ಕಲ್ಯಾಣ ಇಲಾಖೆಗೆ ಎಲ್ಲ ದಾಖಲೆಗಳನ್ನು ಒದಗಿಸಿದ್ದು, ಖಜಾನೆಗೆ ಬಂದ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಅದೇ ರೀತಿ ಬಾಲಕಿಯ 3.75 ಲಕ್ಷ ರೂ. ಸಂತ್ರಸ್ತೆ ಕೆನರಾ ಬ್ಯಾಂಕ್ ಖಾತೆಗೆ ಜಮೆಯಾಗಿದೆ. ಬ್ಯಾಂಕ್ ಖಾತೆ ಮಾಡಿಸಿಕೊಟ್ಟಿದ್ದ ಆತನಿಗೆ ಡೆಬಿಟ್ ಕಾರ್ಡ್ ರಹಸ್ಯ ಸಂಖ್ಯೆಯೂ ಗೊತ್ತಿತ್ತು. ಪ್ರತಿದಿನ 20 ಸಾವಿರ ರೂ.ಗಳಂತೆ ಇಲ್ಲಿವರೆಗೆ 2.10 ಲಕ್ಷ ರೂ. ತೆಗೆದುಕೊಂಡಿದ್ದಾನೆ ಎನ್ನಲಾಗಿದೆ.
ಪರಿಹಾರ ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಿದ ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ಹಣ ತಲುಪಿರುವ ಕುರಿತು ಖಾತರಿಗೆ ಸಂತ್ರಸ್ತೆ ಕುಟುಂಬ ಸದಸ್ಯರೊಬ್ಬರಿಗೆ ಕರೆ ಮಾಡಿದ್ದಾರೆ. ಆಗ ಅವರು ಯಾವುದೇ ಹಣ ಬಂದಿಲ್ಲ ಎಂದು ಉತ್ತರಿಸಿದಾಗ ಗಾಬರಿಗೊಂಡ ಅವರು, ಕೂಡಲೇ ಬ್ಯಾಂಕ್‌ನಲ್ಲಿ ವಿಚಾರಿಸಿದ್ದಾರೆ. ಆಗ ಸಂತ್ರಸ್ತೆ ಖಾತೆಯಿಂದ ಹಣ ಡ್ರಾ ಆಗಿರುವ ವಿಚಾರ ತಿಳಿದಿದೆ. ವಿಚಾರ ಬಹಿರಂಗವಾಗುತ್ತಿದ್ದಂತೆ ಮಂಜುನಾಥ್ ನಾಪತ್ತೆಯಾಗಿದ್ದಾನೆ.