ಹಾಸನ : ಕೋವಿಡ್ ಮೂರನೇ ಅಲೆ ಸಂಬಂಧ ಸರ್ಕಾರ ಕೂಡಲೇ ಶಾಸಕರ ಸಭೆ ಕರೆದು ಚರ್ಚಿಸಬೇಕೆಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಆಗ್ರಹಿಸಿದರು.
ಹೊಳೆನರಸೀಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೆ ಸಿಎಂ ಕೊರೊನಾ ಸಂಬಂಧ ಸಭೆ ನಡೆಸಿದ್ದಾರೆ. ಹೊಸ ಅಲೆ ಬರುತ್ತಿರುವ ಬಗ್ಗೆ ಸರ್ಕಾರ ಕೂಡಲೇ ಎಚ್ಚರಿಕೆ ವಹಿಸಬೇಕಿದೆ. ಜಿಲ್ಲೆ, ತಾಲೂಕು ಆಸ್ಪತ್ರೆಗಳಲ್ಲಿ ಸರಿಯಾದ ಔಷಧಿ ಸರಬರಾಜಿನ ಬಗೆಗೆ ಗಮನ ಹರಿಸಬೇಕು.
ಕೆಲವು ಆಸ್ಪತ್ರೆಯಲ್ಲಿ ಮಿಷನ್‌ಗಳು ಕೆಲಸ ಮಾಡುತ್ತಿಲ್ಲ. ಹೀಗಾಗಿ, ಮೊದಲೇ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು. ಕೊನೆ ಗಳಿಗೆಯಲ್ಲಿ ಇದರ ಬಗ್ಗೆ ಓಡಾಡಬಾರದು ಎಂದು ಸಲಹೆ ನೀಡಿದರು.
ಜಿಲ್ಲಾ ಮಟ್ಟದಲ್ಲಿ ಶಾಸಕರ ಸಭೆ ನಡೆಸಿ ಚರ್ಚೆ ನಡೆಸಬೇಕು. ಅಗತ್ಯವಿರುವ ಆಸ್ಪತ್ರೆಗಳಿಗೆ ವೈದ್ಯರು ಮತ್ತು ನರ್ಸ್‌ಗಳನ್ನು ಕೆಲಸಕ್ಕೆ ನೇಮಿಸಿಕೊಳ್ಳಬೇಕು. ಹಾಸನದ ಅರಕಲಗೂಡು ಭಾಗದಲ್ಲಿ ಕೇರಳ ಗಡಿ ಹತ್ತಿರವಿದೆ. ಅದನ್ನೆಲ್ಲಾ ಸರ್ಕಾರ ಬಿಗಿ ಮಾಡಬೇಕೆಂದು ಮಾಜಿ ಸಚಿವರು ಸರ್ಕಾರಕ್ಕೆ ಕಿವಿಮಾತು ಹೇಳಿದರು.
ಬೈಕ್ನಲ್ಲಿ ಸುತ್ತಿ ಬೆಳೆ ಹಾನಿ ವೀಕ್ಷಣೆ ಮಾಡಿದ ರೇವಣ್ಣ : ಮಾಜಿ ಸಚಿವರು ಹೊಳೆನರಸೀಪುರದ ಹಲವು ಹಳ್ಳಿಗಳಿಗೆ ಬೈಕ್ನಲ್ಲಿ ಸುತ್ತುತ್ತ ಮಳೆಯಿಂದ ಉಂಟಾದ ಬೆಳೆ ಹಾನಿಯನ್ನು ವೀಕ್ಷಿಸಿದರು.
ಕಳೆದೊಂದು ತಿಂಗಳಲ್ಲಿ ಸುರಿದ ಭಾರೀ ಮಳೆಗೆ ಹೊಳೆನರಸೀಪುರದಲ್ಲಿ 40 ಸಾವಿರ ಎಕರೆ ಪ್ರದೇಶದ ರಾಜಮುಡಿ ಭತ್ತ ನಾಶವಾಗಿದೆ. ಬಾಳೆ, ಶುಂಠಿ ಸೇರಿದಂತೆ ಯಾವ ಬೆಳೆಯೂ ಉಳಿದಿಲ್ಲ. ಸರ್ಕಾರ ಪ್ರತಿ ಎಕರೆಗೆ ಕನಿಷ್ಠ 15 ಸಾವಿರ ಪರಿಹಾರ ನೀಡಬೇಕು.
ನಮ್ಮ ತಾಲೂಕಿನಲ್ಲೇ ಸುಮಾರು 40 ಕೋಟಿ ನಷ್ಟವಾಗಿದೆ. ಕೂಡಲೇ ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ 25 ಕೋಟಿ ಬಿಡುಗಡೆ ಮಾಡಬೇಕೆಂದು ಮಾಧ್ಯಮಗಳ ಮೂಲಕ ಆಗ್ರಹಿಸಿದರು.