ಹಾಸನ: ಅಂಬೇಡ್ಕರ್ ರಚಿಸಿರುವ ಸಂವಿಧಾನವನ್ನು ಅನುಸರಿಸಬೇಕು ಹಾಗೂ ಪೌರತ್ವ ಮಸೂದೆ ತಡೆಹಿಡಿಯುವಂತೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಘರ್ಷಗಳಿಗೆ ಅವಕಾಶ ಕಲ್ಪಿಸಬಾರದು. ಎಲ್ಲಾ ರಾಜ್ಯದ, ಎಲ್ಲಾ ಧರ್ಮೀಯರನ್ನ ವಿಶ್ವಾಸಕ್ಕೆ ತೆಗೆದುಕೊಂಡು ನಂತರ ಮಸೂದೆ ಜಾರಿಗೊಳಿಸಬೇಕು. ಪೌರತ್ವ ತಿದ್ದುಪಡಿ ಕಾಯ್ದೆಗೆ ಜೆಡಿಎಸ್ ಪಕ್ಷದ ಬೆಂಬಲವಿಲ್ಲ ಎಂದು ತಿಳಿಸಿದ್ದಾರೆ.
ಜೆಡಿಎಸ್ - ಬಿಜೆಪಿ ನಂಬಿಹಳ್ಳಿ ಗಲಾಟೆಯಲ್ಲಿ ಉದ್ದೇಶಪೂರ್ವಕವಾಗಿ ಜೆಡಿಎಸ್ ಬೆಂಬಲಿಗರನ್ನ ಮಾತ್ರ ಬಂಧಿಸಿದ್ದಾರೆ. ಪೊಲೀಸರ ಈ ಕ್ರಮವನ್ನು ವಿರೋಧಿಸಿ 144 ಸೆಕ್ಷನ್ ಮುಗಿದ ಕೂಡಲೇ ಪ್ರತಿಭಟನೆ ಮಾಡುತ್ತೇವೆ. ಈ ಬಗ್ಗೆ ಪಕ್ಷದ ಶಾಸಕರೊಂದಿಗೆ ಮಾತನಾಡಿ ತೀರ್ಮಾನ ಕೈಗೊಳ್ಳಲಾಗುವುದು. ಅಲ್ಲದೆ ಪ್ರತಿಭಟನೆಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರೂ ಭಾಗಿಯಾಗುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.
870 ಇಂಜಿನಿಯರ್ ಹುದ್ದೆಯನ್ನು ರದ್ದುಪಡಿಸಿದ ವಿಚಾರವಾಗಿ ಮಾತನಾಡುತ್ತಾ, ಮುಖ್ಯಮಂತ್ರಿಯವರು ಕೆಇಎಯಿಂದ ನೇಮಕಾತಿ ರದ್ದುಪಡಿಸಿ ಈಗ ಕೆಪಿಎಸ್‌ಸಿಗೆ ನೇಮಕಾತಿ ಮಾಡಲು ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ ಎರಡು ಸಂಸ್ಥೆ ಇದೆ. ಕೆಪಿಎಸ್ಸಿ ಮತ್ತು ಕೆಇಎ ಬಗ್ಗೆ ಅನುಮಾನ ಇದ್ದಾರೆ ಕೆಇಎ ಪ್ರಾಧಿಕಾರವನ್ನೆ ಮುಚ್ಚಲಿ ಎಂದು ತಾಕೀತು ಮಾಡಿದರು. ಹೆಚ್.ಡಿ.ರೇವಣ್ಣ ಅವರ ಪರವಾಗಿರುವ ಅಭ್ಯರ್ಥಿಗಳಿಗೆ ಹುದ್ದೆ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ನಾನ್ಯಾಕೆ ನನ್ನ ಕಡೆಯವರಿಗೆ ಹುದ್ದೆ ಕೊಡಿಸಲಿ. ಬೇಕಿದ್ರೆ ಈ ಬಗ್ಗೆ ತನಿಖೆ ನಡೆಸಲಿ. ನನ್ನ ಹೆಸರು ಯಾಕೆ ಮಧ್ಯಕ್ಕೆ ಎಳೆದಿದ್ದಾರೆ ಎಂದು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈಗ ಸಿಎಂ ಅವರ ಪರವಾಗಿರುವವರನ್ನು ಹುದ್ದೆಗೆ ನೇಮಿಸಿಕೊಳ್ಳುವುದಿಲ್ಲ ಅನ್ನೋದು ಏನು ಗ್ಯಾರಂಟಿ? ಎಂದು ಪ್ರಶ್ನಿಸಿದ ರೇವಣ್ಣ, ಈಗಾಗಲೇ 64 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ಬರೆಯುವ ಮೊದಲು ಇದೇ ವಿದ್ಯಾರ್ಥಿಗಳು ಸಾವಿರಾರು ರೂಪಾಯಿ ಕೊಟ್ಟು ತರಬೇತಿ ಪಡೆದು ಪರೀಕ್ಷೆ ಬರೆದಿದ್ದಾರೆ. ನಾನು ದ್ವೇಷದ ರಾಜಕಾರಣ ಮಾಡಲ್ಲ ಎಂದಿದ್ದ ಸಿಎಂ ಈಗ ಮತ್ತೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಜಿಲ್ಲೆಯ ಅಧಿಕಾರಿಗಳು ಕಾನೂನು ಮೀರಿ ಕೆಲಸ ಮಾಡಬಾರದು. ಹಾಗೇನಾದ್ರು ಮಾಡಿದ್ರೆ ಮುಂದಿನ ದಿನಗಳಲ್ಲಿ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಡಿಸಿ, ಎಸ್ಪಿ ಸೇರಿ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಜಾಗೃತರಾಗಿರಬೇಕು. ಒಂದು ಪಕ್ಷದ ಏಜೆಂಟರಂತೆ ಎಸ್ಪಿ-ಡಿಸಿ ವರ್ತಿಸಬಾರದು ಎಂದು ಹೇಳುವ ಮೂಲಕ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಟಾಂಗ್ ನೀಡಿದರು.