ಹಾಸನ: ಕಳೆದೊಂದು ವಾರದಿಂದ ಪುಂಡಾಟವಾಡುತ್ತಾ, ಇಬ್ಬರನ್ನು ಬಲಿ ತೆಗೆದುಕೊಂಡಿರುವ ಒಂಟಿ ಸಲಗವನ್ನು ಸೆರೆ ಹಿಡಿಯಲು ಹಾಸನಕ್ಕೆ 5 ದಸರಾ ಆನೆಗಳನ್ನು ಕರೆತರಲಾಗಿದೆ.
ಹಾಸನ ನಗರದ ಮತ್ತು ಹೊರವಲಯದಲ್ಲಿ ಓಡಾಡುತ್ತಾ ಜನರನ್ನ ಬೆಚ್ಚಿಬೀಳಿಸಿದ್ದ ಒಂಟಿ ಸಲಗ ಇಬ್ಬರನ್ನ ಬಲಿ ತೆಗೆದುಕೊಂಡಿದೆ. ಇದರಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಪುಂಡಾನೆ ಸೆರೆ ಹಿಡಿಯಲು 5 ದಸರಾ ಆನೆಗಳನ್ನು ಕರೆತಂದಿದೆ. ಮತ್ತಿಗೋಡು ಮತ್ತು ದುಬಾರೆ ಆನೆ ಶಿಬಿರದಿಂದ ದಸರಾ ಆನೆಗಳಾದ ಅಭಿಮನ್ಯು, ಹರ್ಷ, ಅಜೇಯ, ಕೃಷ್ಣ ಮತ್ತು ವಿಕ್ರಂ ಎಂಬ ಐದು ಆನೆಗಳು ಹಾಸನಕ್ಕೆ ರವಾನೆಯಾಗಿವೆ.
ಒಂದು ತಿಂಗಳ ಹಿಂದೆ ಹುಣಸಿನಕೆರೆಗೆ ಪುಂಡಾನೆ ದಾಂಗುಡಿಯಿಟ್ಟು ಆ ಭಾಗದ ಜನರ ನಿದ್ದೆಗೆಡಿಸಿತ್ತು. ಇದೇ ಆನೆ ಬಳಿಕ ಹಳೇಬೀಡು ಹೋಬಳಿಯ ಅಡಗೂರು ಗ್ರಾಮದಲ್ಲಿ ಓರ್ವ ಮಹಿಳೆಯನ್ನ ಬಲಿ ಪಡೆದಿತ್ತು. ಜಮೀನು ಕೆಲಸಕ್ಕೆ ಹೋಗುವವರ ಮೇಲೆ ದಾಳಿಗೆ ಮುಂದಾದಾಗ ಅದೃಷ್ಟವಶಾತ್ ಕೆಲ ಜನರು ಕೂದಲೆಳೆ ಅಂತರದಿಂದ ಪಾರಾಗಿದ್ದರು.
ಮೊನ್ನೆ ತಾನೆ ನಗರದ ಪೆನ್ಷನ್ ಮೊಹಲ್ಲಾ, ಜವೇನಹಳ್ಳಿ ಕೆರೆಯಲ್ಲಿ ಪುಂಡಾನೆ ಕಾಣಿಸಿಕೊಂಡಿತ್ತು. ಅರಣ್ಯ ಇಲಾಖೆ ತಕ್ಷಣ ಕಾರ್ಯಪ್ರವೃತ್ತರಾಗಿ ಆನೆಯನ್ನ ಕೆರೆಯಿಂದ ಸೀಗೆಗುಡ್ಡದ ಅರಣ್ಯ ಪ್ರದೇಶಕ್ಕೆ ಅಟ್ಟುವಂತಹ ಕೆಲಸ ಮಾಡಿದ್ರು. ಆದರೆ ಪುಂಡಾನೆ ಅಲ್ಲಿಯೂ ಸುಮ್ಮನಿರದೆ, ಅರಣ್ಯ ವೀಕ್ಷಕ ಅಣ್ಣೇಗೌಡರ ಮೇಲೆ ದಾಳಿ ನಡೆಸಿ, ಕ್ರೂರವಾಗಿ ಕೊಂದುಹಾಕಿತ್ತು.
ಈ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡ ಅರಣ್ಯ ಇಲಾಖೆಯ ಉಪಸಂರಕ್ಷಣಾಧಿಕಾರಿ ಶಿವರಾಂ ಬಾಬು ಅವರು, ಸರ್ಕಾರದ ಅನುಮತಿ ಪಡೆದು, ಪುಂಡಾನೆ ಸೆರೆಹಿಡಿಯಲು ಮುಂದಾಗಿದ್ದಾರೆ.
ಕಾರ್ಯಾಚರಣೆಗಾಗಿ ಆಗಮಿಸಿರುವ ದಸರಾ ಆನೆಗಳನ್ನು ಸದ್ಯ ಹಾಸನ ತಾಲ್ಲೂಕಿನ ವೀರಾಪುರದಲ್ಲಿ ತಾತ್ಕಾಲಿಕ ಕ್ಯಾಂಪ್ನಲ್ಲಿ ಇರಿಸಲಾಗಿದೆ. ಇನ್ನೇನು ಪುಂಡಾನೆ ಸೆರೆಹಿಡಿಯುವ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಶಿವರಾಂ ಬಾಬು ಮಾಹಿತಿ ನೀಡಿದ್ದಾರೆ.