ಹಾಸನ: ನಗರದ ಹೊಸ ಬಸ್ ನಿಲ್ದಾಣ ಎದುರು ಹೌಸಿಂಗ್ ಬೋರ್ಡ್‌ನಲ್ಲಿರುವ ಎಲ್ ಅಂಡ್ ಟಿ ಫೈನಾನ್ಸ್‌ನವರು ಸಾಲದ ಮರು ಪಾವತಿಗಾಗಿ ರೈತರೊಬ್ಬರ ಟ್ರ್ಯಾಕ್ಟರ್ ಜಪ್ತಿ ಮಾಡಿರುವುದನ್ನು ಖಂಡಿಸಿ ಮಂಗಳವಾರ ರೈತ ಸಂಘದವರು ಮತ್ತೆ ಪ್ರತಿಭಟನೆ ನಡೆಸಿ ಕಂಪನಿಗೆ ಬೀಗ ಹಾಕಲು ಮುಂದಾಗಿದ್ದರು.
ರೈತರು ಪ್ರತಿಭಟಿಸಲು ಬಂದಾಗ ಎಲ್ ಅಂಡ್ ಟಿ ಫೈನಾನ್ಸ್ ಕಚೇರಿ ಬಾಗಿಲು ತೆಗೆಯದೆ ಬೀಗ ಹಾಕಿಕೊಂಡು ಸಿಬ್ಬಂದಿ ಅಲ್ಲಿಂದ ಪಲಾಯನ ಮಾಡಿದ್ದರು. ನಮಗೆ ನ್ಯಾಯ ಸಿಗುವವರೆಗೂ ಇದಕ್ಕೆ ಮತ್ತೊಂದು ಬೀಗ ಜಡಿಯುವುದಾಗಿ ರೈತರು ಎಚ್ಚರಿಸಿದರು. ಇತ್ತೀಚೆಗಷ್ಟೇ ಇದೇ ಕಚೇರಿ ಎದುರು ರೈತರು ಪ್ರತಿಭಟಿಸಿದ್ದರಾದರೂ ಸಮಸ್ಯೆ ಬಗೆಹರಿಸುವಲ್ಲಿ ಫೈನಾನ್ಸ್‌ನವರು ವಿಫಲರಾಗಿದ್ದಾರೆಂದು ಕಚೇರಿಗೆ ಬೀಗ ಜಡಿಯಲು ರೈತರು ಮುಂದಾಗಿದ್ದರು. ಹಾಸನ ತಾಲೂಕಿನ ಶಾಂತಿ ಗ್ರಾಮ ಹೋಬಳಿ ಅದ್ದಿಹಳ್ಳಿ ಗ್ರಾಮದ ನಿವಾಸಿ ಹೆಚ್.ಆರ್.ದೀಪಕ್ ಎಂಬುವರ ಪ್ರಕರಣ ಇದಾಗಿದೆ.
ಈವರೆಗೂ ದೀಪಕ್ ಅವರಿಗೆ ವಾಹನವನ್ನು ಫೈನಾನ್ಸ್‌ನವರು ವಾಪಸ್ ನೀಡಿಲ್ಲ. ನಾಲ್ಕೈದು ಬಾರಿ ಹೋಗಿ ಕೇಳಿದರೂ ಸಹ ಪ್ರಯೋಜನವಾಗಿಲ್ಲವಂತೆ. ನಮಗೆ ನ್ಯಾಯ ಸಿಗಬೇಕು. ಹಾಗೂ ದೀಪಕ್ ಅವರಿಗೆ ವಾಹನ ವಾಪಸ್ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.