ಹಾಸನ: ಸಾಲಬಾಧೆಗೆ ಹೆದರಿ ರೈತನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅರಕಲಗೂಡು ತಾಲೂಕಿನ ಬೀಜಘಟ್ಟ ಗ್ರಾಮದಲ್ಲಿ ನಡೆದಿದೆ.
ರಾಜೇಗೌಡ (65) ಮೃತ ರೈತನಾಗಿದ್ದು, ಮರದ ಕೊಂಬೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ತನ್ನ ಕೃಷಿ ಭೂಮಿಯಲ್ಲಿ ಬೆಳೆದ ಬೆಳೆ ನಾಶವಾದ ಹಿನ್ನೆಲೆ ಕೈ ಸಾಲ ಮತ್ತು ಬ್ಯಾಂಕ್ ನೋಟಿಸ್ಗೆ ಹೆದರಿ ಇಂದು ಬೆಳಗಿನ ಜಾವ ನೇಣಿಗೆ ಶರಣಾಗಿದ್ದಾನೆ.
ಕೆನರಾ ಬ್ಯಾಂಕ್ ಮತ್ತು ಸಹಕಾರಿ ಸಂಘ ಹಾಗೂ ಕೈ ಸಾಲ ಸೇರಿ ಈತ ಒಟ್ಟು 10 ಲಕ್ಷಕ್ಕೂ ಅಧಿಕ ಮೌಲ್ಯದ ಸಾಲ ಮಾಡಿದ್ದು, ಸಾಲ ತೀರಿಸಲಾಗದೇ ಸಾವಿಗೆ ಶರಣಾಗಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ.
ಇನ್ನು ಈ ಸಂಬಂಧ ಅರಕಲಗೂಡು ಪೊಲೀಸರು ಭೇಟಿ ನೀಡಿ ಮೃತ ದೇಹದ ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು, ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.