ಹಾಸನ: ಕಳೆದ 11 ದಿನಗಳಿಂದ ಲಕ್ಷಾಂತರ ಜನ ಭಕ್ತರಿಗೆ ದರ್ಶನ ನೀಡಿದ ಅರಸೀಕೆರೆ ತಾಲೂಕಿನ ಮಾಡಾಳು ಗೌರಮ್ಮ ದೇವಿಯನ್ನು ಕುಪ್ಪೂರು ಗದ್ದಿಗೆ ಸ್ವಾಮೀಜಿ ಹಾಗೂ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಿಮಜ್ಜನ ಮಾಡಲಾಯಿತು.
ಬಾದ್ರಪದ ಮಾಸದ ತದಿಗೆಯ ದಿನ ಸ್ವರ್ಣಗೌರಿ ದಿನದಂದು ಪ್ರತಿಷ್ಠಾಪಿಸಲ್ಪಡುವ ಮಾಡಾಳು ಶ್ರೀ ಸ್ವರ್ಣಗೌರಿಯ ದರ್ಶನಕ್ಕೆ ಅರಸೀಕೆರೆ ತಾಲೂಕಿನಲ್ಲಷ್ಟೇ ಅಲ್ಲದೇ, ಹೊರರಾಜ್ಯಗಳಿಂದಲೂ ನಿತ್ಯ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. 11 ದಿನಗಳಲ್ಲಿ ಸುಮಾರು 8 ಲಕ್ಷಕ್ಕೂ ಅಧಿಕ ಭಕ್ತರು ಬಂದು ದೇವಿಯ ದರ್ಶನ ಭಾಗ್ಯ ಪಡೆದು ಪುನೀತರಾಗಿದ್ದಾರೆ. ದಿನದ 24 ಗಂಟೆಗಳ ಕಾಲ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಿರಂತರ ಅನ್ನಸಂತರ್ಪಣೆ ನಡೆಸಿದ ದೇವಾಲಯ ಅಭಿವೃದ್ಧಿ ಸಮಿತಿಯು ಎಲ್ಲರ ಮೆಚ್ಚುಗೆಗೆ ಪಾತ್ರವಾಯ್ತು.
ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯದಂತೆ ಶಾಸ್ತ್ರೋಕ್ತ ಧಾರ್ಮಿಕ ಕೈಂಕರ್ಯಗಳನ್ನು ನಡೆಸಿ, ಬುಧವಾರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಗೌರಮ್ಮನ ಉತ್ಸವ ನಡೆಲಾಯಿತು. ಮೆರವಣಿಗೆ ನಂತರ ದೇವಾಲಯ ಸಮೀಪ ಇರುವ ಕಲ್ಯಾಣಿಯಲ್ಲಿ ಪೂಜಾವಿಧಿ ವಿಧಾನಗಳನ್ನು ನೆರವೇರಿಸಿ, ದೇವಿಗೆ ತೊಡಿಸಲಾಗಿದ್ದ ವಜ್ರದ ಮೂಗುತಿ ತೆಗೆದು ಕಲ್ಯಾಣಿ ನೀರಿನಲ್ಲಿ ನಿಮಜ್ಜನ ನೆರವೇರಿಸಲಾಯಿತು.