ಅರಕಲಗೂಡು (ಹಾಸನ): ತಂಬಾಕು ಮಂಡಳಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ 1 ವರ್ಷದಿಂದಲೂ ವಿಳಂಬವಾಗಿದ್ದ ಮರಣ ನಿಧಿಯ ಹಣವು ಮೃತರ ಕುಟುಂಬಸ್ಥರ ಕೈಸೇರಿದೆ.
ರಾಮನಾಥಪುರ ತಂಬಾಕು ಹರಾಜು ಮಾರುಕಟ್ಟೆ ವ್ಯಾಪ್ತಿಗೆ ಸೇರಿರುವ ಸುಮಾರು 32 ಜನ ತಂಬಾಕು ಬೆಳೆಗಾರರು ಮೃತಪಟ್ಟು ಸುಮಾರು 1 ವರ್ಷ ಕಳೆದರೂ ಪರಿಹಾರ ಹಣ ಕೈಸೇರಿರಲಿಲ್ಲ. ತಂಬಾಕು ಮಂಡಳಿ ಮತ್ತು ಅಧಿಕಾರಿಗಳು ಕೋವಿಡ್ ನೆಪ ಹೇಳಿ, ಸಂಬಂಧಿಸಿದ ದಾಖಲೆಗಳನ್ನು ಕೇಂದ್ರ ಕಚೇರಿಗೆ ಕಳುಹಿಸದೆ ರೈತರ ಕ್ಷೇಮಾಭಿವೃದ್ಧಿ ನಿಧಿಯ ಹಣವನ್ನು ಮೃತರ ಕುಟುಂಬಕ್ಕೆ ಮಂಜೂರು ಮಾಡುವಲ್ಲಿ ವಿಳಂಬ ಮಾಡಿದ್ದರು.
ಈ ಕುರಿತಂತೆ ಈಟಿವಿ ಭಾರತ, ‘ಮೃತ ತಂಬಾಕು ಬೆಳೆಗಾರರಿಗೆ ಹಣ ಪಾವತಿಸದಿದ್ದಲ್ಲಿ ಹೋರಾಟ: ಸೀಬಳ್ಳಿ ಯೋಗಣ್ಣ’ ಎಂಬ ಶೀರ್ಷಿಕೆಯಡಿ ವರದಿ ಸಹ ಪ್ರಕಟಿಸಿತ್ತು. ವರದಿ ಗಮನಿಸಿದ್ದ ಅಧಿಕಾರಿಗಳು ಮೃತ ಕುಟುಂಬಕ್ಕೆ ನೀಡಬೇಕಿದ್ದ ಬಾಕಿ ಮರಣ ನಿಧಿ ಹಣವನ್ನು 10 ದಿನಗಳ ಒಳಗೆ ಮಂಜೂರು ಮಾಡಿದೆ.
ಆಕಸ್ಮಿಕವಾಗಿ ಮರಣ ಹೊಂದಿದ ಸಿಂಗಲ್ ಬ್ಯಾರಲ್ ಪರವಾನಿಗೆ ಹೊಂದಿರುವ ಬೆಳೆಗಾರರಿಗೆ 1 ಲಕ್ಷ ಮತ್ತು ಸ್ವಾಭಾವಿಕ ಮರಣ ಹೊಂದಿದವರಿಗೆ ಮಂಡಳಿಯು 50 ಸಾವಿರ ರೂ. ನೀಡಲಾಗುತ್ತದೆ. ( ಡಬಲ್ ಬ್ಯಾರಲ್ ಲೈಸೆನ್ಸ್ ಹೊಂದಿದ ಬೆಳೆಗಾರರ ಸ್ವಾಭಾವಿಕ ಮರಣಕ್ಕೆ 1 ಲಕ್ಷ ಮತ್ತು ಆಕಸ್ಮಿಕ ಮರಣಕ್ಕೆ 2 ಲಕ್ಷ )
ಈ ಕುರಿತು ಮಾಹಿತಿ ಜೊತೆ ಸಂತಸ ಹಂಚಿಕೊಂಡಿರುವ ರೈತ ಸಂಘದ ಅಧ್ಯಕ್ಷ ಸೀಬಳ್ಳಿ ಯೋಗಣ್ಣ, ಈ ಕುರಿತು ನಿರಂತರ ಸುದ್ದಿ ಮಾಡಿ ಅಧಿಕಾರಿಗಳಿಗೆ ತಲುಪಿಸಿ, ಹಣ ಕೈಸಿಗುವಂತೆ ಮಾಡಿದ ಈಟಿವಿ ಸುದ್ದಿವಾಹಿನಿಗೆ ಧನ್ಯವಾದಗಳು ಎಂದಿದ್ದಾರೆ.
ಇನ್ನು, ಹೊಗೆಸೊಪ್ಪು ಬೆಳೆಗಾರರಿಗೆ ಸಂದಾಯವಾಗಬೇಕಿದ್ದ ಹಣ ಪಾವತಿಯಾಗಿದ್ದು, ಇದಕ್ಕಾಗಿ ಈಟಿವಿ ಭಾರತ್ಗೆ ಮೃತರ ಕುಟಂಬಸ್ಥರು ಧನ್ಯವಾದ ಅರ್ಪಿಸಿದ್ದಾರೆ.
ಇದನ್ನೂ ಓದಿ: ಮೃತ ತಂಬಾಕು ಬೆಳೆಗಾರರಿಗೆ ಹಣ ಪಾವತಿಸದಿದ್ದಲ್ಲಿ ಹೋರಾಟ: ಸೀಬಳ್ಳಿ ಯೋಗಣ್ಣ