ಹಾಸನ/ಸಕಲೇಶಪುರ: ಕಾಡಾನೆಯೊಂದು ಗ್ರಾಮಕ್ಕೆ ನುಗ್ಗಿ ಮನೆಯ ಆವರಣದೊಳಗೆ ದಾಳಿಯಿಟ್ಟು ಆತಂಕ ಸೃಷ್ಟಿಸಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ. ಇಲ್ಲಿನ ಮಠ ಸಾಕಾರ ಗ್ರಾಮದಲ್ಲಿ ಕಾಡಾನೆಯೊಂದು ದಾಳಿ ನಡೆಸಿ ವಿನೋದ್ ಎಂಬುವರ ಮನೆಗೆ ನುಗ್ಗಿ ಕೆಲಕಾಲ ಆತಂಕ ಸೃಷ್ಟಿಸಿದೆ.
ಮನೆಯ ಆವರಣದಲ್ಲಿ ಆನೆಯನ್ನು ಕಂಡ ಕುಟುಂಬ ಸದಸ್ಯರು ಆತಂಕಗೊಂಡಿದ್ದು, ಮಕ್ಕಳು ಕಿರುಚಾಟ ನಡೆಸಿದ್ದಾರೆ. ಈ ಕಿರುಚಾಟ ಕೇಳಿದ ಪೋಷಕರು ಹೊರಬಂದು ನೋಡಿದಾಗ ಆನೆ ಕಿಟಕಿ ಒಡೆಯಲು ಪ್ರಯತ್ನಪಡುತ್ತಿರುವುದನ್ನು ಕಂಡಿದ್ದಾರೆ. ಬಳಿಕ ಪಟಾಕಿ ಸಿಡಿಸಿ ಆನೆಯನ್ನು ಓಡಿಸಿದ್ದಾರೆ. ಆನೆ ಗ್ರಾಮದ ಬೀದಿಗಳಲ್ಲಿ ನಡೆದುಕೊಂಡು ಹೋಗುವ ದೃಶ್ಯ ಸೆರೆಯಾಗಿದ್ದು, ಗ್ರಾಮಸ್ಥರು ಇದನ್ನು ಕಂಡು ಭಯಭೀತರಾಗಿದ್ದಾರೆ.
ಮಲೆನಾಡು ಭಾಗದ ಸಕಲೇಶಪುರ, ಆಲೂರು ಮತ್ತು ಬೇಲೂರು ತಾಲೂಕಿನಲ್ಲಿ ಆನೆ ಹಾವಳಿ ಹೆಚ್ಚಾಗಿದ್ದು, ರೈತರ ಬೆಳೆಗಳನ್ನು ಕಾಡಾನೆಗಳು ನಾಶಪಡಿಸುತ್ತಿವೆ. ಆನೆಯನ್ನು ಸೆರೆಹಿಡಿದು ಸ್ಥಳಾಂತರ ಮಾಡಬೇಕು ಎಂದು ಸ್ಥಳೀಯ ಶಾಸಕರ ನೇತೃತ್ವದಲ್ಲಿ ಹಲವು ಬಾರಿ ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಆನೆ ಹಾವಳಿಯನ್ನು ತಪ್ಪಿಸಿ, ಮಾನವ ಮತ್ತು ಪ್ರಾಣಿ ಸಂಘರ್ಷಕ್ಕೆ ಸರ್ಕಾರ ಶಾಶ್ವತ ಪರಿಹಾರ ದೊರಕಿಸಿಕೊಡಬೇಕು ಎಂದು ಜಿಲ್ಲೆಯ ಜನರು ಆಗ್ರಹಿಸಿದ್ದಾರೆ.
ಓದಿ : ಮೊಬೈಲ್ ಕ್ಲಿನಿಕ್ಗೆ ಸಿಎಂ ಚಾಲನೆ: ಬೇರೆ ಜಿಲ್ಲೆಗಳಿಗೂ ವಿಸ್ತರಿಸಲು ಚಿಂತನೆ ಎಂದ ಬೊಮ್ಮಾಯಿ