ಹಾಸನ: ಬಿಜೆಪಿಯ ನೂತನ ಜಿಲ್ಲಾಧ್ಯಕ್ಷರಾಗಿ ಹುಲ್ಲಹಳ್ಳಿ ಸುರೇಶ್ ಅವರನ್ನು ನೇಮಕ ಮಾಡಿದ್ದು, ಭಾನುವಾರ ಅಧಿಕೃತವಾಗಿ ಘೋಷಣೆಯಾಗಿದೆ.
ಬಿಜೆಪಿ ಜಿಲ್ಲಾ ಘಟಕದ ಪದಾಧಿಕಾರಿಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಬೇಲೂರು ಕ್ಷೇತ್ರದ ಪರಾಜಿತ ಅಭ್ಯರ್ಥಿ ಹುಲ್ಲಳ್ಳಿ ಸುರೇಶ್, ಹಾಸನ ನಗರಸಭೆ ಮಾಜಿ ಸದಸ್ಯ ಹೆಚ್.ಎಂ.ಸುರೇಶ್ ಕುಮಾರ್, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಬಿ.ಎಚ್.ರೇಣುಕುಮಾರ್, ಅರಸೀಕೆರೆಯ ಜಿವಿಟಿ ಬಸವರಾಜ್ ನಡುವೆ ಪೈಪೋಟಿ ಏರ್ಪಟ್ಟಿತ್ತು.
ಈ ಬಾರಿ ಒಕ್ಕಲಿಗ ಸಮುದಾಯಕ್ಕೆ ಆದ್ಯತೆ ನೀಡಲು ವರಿಷ್ಠರು ನಿರ್ಧರಿಸಿರುವ ಕಾರಣ ಹುಲ್ಲಳ್ಳಿ ಸುರೇಶ್ ಹಾಗೂ ಸುರೇಶ್ ಕುಮಾರ್ ನಡುವೆ ಪೈಪೋಟಿ ಇತ್ತು. ಒಕ್ಕಲಿಗ ಸಮುದಾಯದ ಹುಲ್ಲಳ್ಳಿ ಸುರೇಶ್, ವೃತ್ತಿಯಿಂದ ಗುತ್ತಿಗೆದಾರರು ಹಾಗೂ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದಾರೆ. 2008ರಲ್ಲಿ ಹಾಸನ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಬಳಿಕ ಬೇಲೂರು ವಿಧಾನಸಭಾ ಕ್ಷೇತ್ರದತ್ತ ಗಮನಹರಿಸಿ, ಪಕ್ಷ ಸಂಘಟನೆಗೆ ಒತ್ತು ನೀಡಿದರು. 2018ರಲ್ಲಿ ಬೇಲೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ 45 ಸಾವಿರ ಮತ ಗಳಿಸಿ ಮತ್ತೊಮ್ಮೆ ಸೋತರು. ಆರ್ಥಿಕವಾಗಿ ಪ್ರಬಲವಾಗಿರುವ ಅವರು, ರಾಜ್ಯದ ನಾಯಕರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ.