ಅರಕಲಗೂಡು (ಹಾಸನ) : ಜಿಲ್ಲೆಯ ಅರಕಲಗೂಡು ತಾಲೂಕಿನ ನೆಲಮನೆ ಹೊನ್ನವಳ್ಳಿ ಗ್ರಾಮದಲ್ಲಿ ಜಲೇಂದ್ರ (31) ಎಂಬುವನನ್ನು ನಿನ್ನೆ (ಗುರುವಾರ) ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಆರೋಪಿಗಳ ಪತ್ತೆಗೆ ಅರಕಲಗೂಡು ಮತ್ತು ಕೊಣನೂರು ಪೊಲೀಸರು 2 ವಿಶೇಷ ತಂಡ ರಚಿಸಿದ್ದರು. 24 ಗಂಟೆಯೊಳಗೆ ಕೊಲೆಗಾರರನ್ನು ಪತ್ತೆ ಹಚ್ಚುವಲ್ಲಿ ಶ್ವಾನದಳ ಯಶಸ್ವಿಯಾಗಿದ್ದು, ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಏನಿದು ಪ್ರಕರಣ?: ಜೆಸಿಬಿ ಮಾಲೀಕ ಮತ್ತು ಚಾಲಕನಾಗಿದ್ದ ಜಲೇಂದ್ರನಿಗೆ ಕಂಠಪೂರ್ತಿ ಕುಡಿಸಿ ಮಧ್ಯರಾತ್ರಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಬೆಳಗ್ಗೆ ಗ್ರಾಮಸ್ಥರೊಬ್ಬರು ಶವವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕೆ ಭೇಟಿ ನೀಡಿದ ಪೊಲೀಸರು ಪರಿಶೀಲಿಸಿದಾಗ ಕೊಲೆಯಾದ ವ್ಯಕ್ತಿ ಜಲೇಂದ್ರ ಎಂದು ಗೊತ್ತಾಗಿದೆ. ಸ್ಥಳದಲ್ಲಿ ಸಿಕ್ಕ ಕೆಲ ಸಾಕ್ಷ್ಯಾಧಾರವನ್ನು ಕಲೆ ಹಾಕಿದ ಪೊಲೀಸರು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದರು.
ಸಂಜೆಯೊಳಗೆ ಆರೋಪಿಯ ಪತ್ತೆ : ಸ್ಥಳಕ್ಕೆ ಬೆರಳಚ್ಚು ತಜ್ಞರ ಜತೆಗೆ ಶ್ವಾನದಳವನ್ನು ಕೂಡ ಕರೆಸಲಾಗಿತ್ತು. ಶ್ವಾನದಳದಲ್ಲಿ ಬಂದಿದ್ದ ಸಿಂಧು ಎಂಬ ಶ್ವಾನ ಸ್ಥಳದ ವಾಸನೆಯನ್ನು ಗ್ರಹಿಸಿದ ಬಳಿಕ ಕೊಲೆ ಮಾಡಿದವನ ಮನೆಯ ಬಳಿ ಹೋಗಿ ಬೊಗಳಲು ಪ್ರಾರಂಭಿಸಿತು. ನಾಯಿ ಬೊಗಳುವ ಶಬ್ಧ ಕೇಳಿ ಹೊರ ಬಂದಾಗ ಆತನನ್ನು ನೋಡಿ ಮತ್ತಷ್ಟು ಜೋರಾಗಿ ಬೊಗಳಲು ಪ್ರಾರಂಭಿಸಿದಾಗ, ಪೊಲೀಸರು ಹೊರ ಬಂದ ವ್ಯಕ್ತಿಯನ್ನು ಸ್ಥಳದಲ್ಲಿಯೇ ಬಂಧಿಸಿದರು.
ಸಹೋದರನೇ ಕೊಲೆಗಾರ : ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರಿಗೆ ಕೊಲೆಯಾದ ಜಲೇಂದ್ರನ ಅಣ್ಣನೇ ಕೊಲೆಗಾರ ಎಂದು ಗೊತ್ತಿರಲಿಲ್ಲ. ಶ್ವಾನದಳದ ಸಹಾಯದಿಂದ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಮಹೇಶ್ ಎಂಬಾತನನ್ನು ಬಂಧಿಸಿದ್ದಾರೆ.
ಆಸ್ತಿಗಾಗಿ ಹತ್ಯೆ : ಕೊಲೆಯಾದ ಜಲೇಂದ್ರ ಮತ್ತು ಆರೋಪಿ ಮಹೇಶ್ ತಂದೆ ಇತ್ತೀಚೆಗಷ್ಟೇ ಅಕಾಲಿಕ ಮರಣಕ್ಕೆ ತುತ್ತಾಗಿದ್ದರು. ತಂದೆ ಸಾವಿಗೀಡಾದ ಹಿನ್ನೆಲೆ ತಂದೆಯ ಹೆಸರಿನಲ್ಲಿದ್ದ ಆಸ್ತಿಯನ್ನು ಆರೋಪಿ ಮಹೇಶ್ ತನ್ನ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದ. ಸಹೋದರ ಜಲೇಂದ್ರ ಜೆಸಿಬಿ ಮಾಲೀಕನಾಗಿದ್ದು, ತುಮಕೂರಿನಲ್ಲಿ ವಾಸವಿದ್ದ. ಕೊರೊನಾ ಹಿನ್ನೆಲೆಯಲ್ಲಿ ತುಮಕೂರಿನಿಂದ ಮರಳಿ ಸ್ವಗ್ರಾಮ ನೆಲಮನೆ ಹೊನ್ನವಳ್ಳಿಗೆ ಬಂದು ಜೆಸಿಬಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ.
ಆಸ್ತಿ ವಿಚಾರದಲ್ಲಿ ಮೂರ್ನಾಲ್ಕು ತಿಂಗಳಿಂದ ಸಹೋದರರ ನಡುವೆ ಸಣ್ಣಪುಟ್ಟ ವೈಮನಸ್ಸು ಬೆಳೆದಿತ್ತು. ಆಸ್ತಿಯನ್ನು ಪಾಲು ಮಾಡುವಂತೆ ಕೊಲೆಯಾದ ಜಲೇಂದ್ರ ಪಟ್ಟು ಹಿಡಿದಿದ್ದ. ಜಮೀನಿನಲ್ಲಿ ಭಾಗಾಂಶ ಕೊಡಲು ಅಣ್ಣ ಮಹೇಶ್ ಹಿಂದೇಟು ಹಾಕುತ್ತಿದ್ದ.
ಮದ್ಯಪಾನ ಮಾಡಿಸಿ ಕೊಲೆ : ಇವರಿಬ್ಬರ ಜಗಳ ನಿರಂತರವಾಗಿತ್ತು. ನಿನ್ನೆ ಜಮೀನಿನ ವಿಚಾರ ಮಾತಾಡೋಣ ಎಂದು ಸಹೋದರನಿಗೆ ಫೋನ್ ಮಾಡಿ ಮಹೇಶ್ ಕರೆಸಿಕೊಂಡಿದ್ದನಂತೆ. ಬಳಿಕ ಜಮೀನಿನ ಬಳಿ ಕುಳಿತು ಮದ್ಯ ಸೇವಿಸಿದ್ದಾರೆ. ಕಂಠಪೂರ್ತಿ ಕುಡಿದು ಸುಸ್ತಾಗಿದ್ದ ಸಹೋದರ ಜಲೇಂದ್ರಗೆ ಅಣ್ಣ ಮಹೇಶ್ ತಾನು ಮೊದಲೇ ತಂದಿದ್ದ ಕಟ್ಟಿಗೆಯಿಂದ ಏಕಾಏಕಿ ತಲೆಗೆ ಬಲವಾಗಿ ಹೊಡೆದಿದ್ದು, ನಂತರ ಚಾಕುವಿನಿಂದ ಕುತ್ತಿಗೆಯನ್ನು ಸೀಳಿ ಕೊಲೆ ಮಾಡಿ ತನಗೇನು ಗೊತ್ತಿಲ್ಲದಂತೆ ಮನೆಯಲ್ಲಿ ಅಡಗಿ ಕುಳಿತಿದ್ದ.
ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದರು. ಇದೇ ಸಮಯಕ್ಕೆ ಸ್ಥಳಕ್ಕೆ ಕರೆತರಲಾಗಿದ್ದ ಶ್ವಾನಗಳ ಸಹಾಯದಿಂದ ಆರೋಪಿಯನ್ನು ಬಂಧಿಸುವಲ್ಲಿ ಅರಕಲಗೂಡು ಮತ್ತು ಕೊಣನೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿ ಮಹೇಶ್ನನ್ನು ವಿಚಾರಣೆ ನಡೆಸಿದ್ದು, ಆಸ್ತಿಗಾಗಿ ತಮ್ಮನನ್ನೇ ಬರ್ಬರವಾಗಿ ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.