ಹಾಸನ: ಸಾಮಾನ್ಯವಾಗಿ ಇವತ್ತಿನ ಹೆಣ್ಣು ಮಕ್ಕಳು ಪ್ರಸವ ಸಂದರ್ಭದಲ್ಲಿ ಸಹಜ ಪ್ರಸವಕ್ಕಿಂತ ಹೆಚ್ಚಾಗಿ ಸಣ್ಣ ನೋವಾಗದ ರೀತಿಯಲ್ಲಿ ಮಗುವಿಗೆ ಜನ್ಮ ಕೊಡಬೇಕೆಂದು ಬಯಸುವವರೇ ಹೆಚ್ಚು. ಈ ಮಧ್ಯೆ ಇಲ್ಲಿನ ಆಸ್ಪತ್ರೆಯ ವೈದ್ಯೆಯೊಬ್ಬರು ವಿಭಿನ್ನವಾಗಿದ್ದಾರೆ. ಶೇ. 100ಕ್ಕೆ ನೂರರಷ್ಟು ಸುಖ ಪ್ರಸವ ಮಾಡಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಇದು ಹಾಸನ ಜಿಲ್ಲೆಯ ಆಲೂರು ತಾಲೂಕಿನ ಪಾಳ್ಯ ಗ್ರಾಮ. ಗ್ರಾಮ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿರೋ ಈ ಗ್ರಾಮಕ್ಕೆ ಸುಮಾರು 48ಕ್ಕೂ ಹೆಚ್ಚಿನ ಹಳ್ಳಿಗಳು ಸೇರ್ಪಡೆಗೊಳ್ಳುತ್ತವೆ. ಹಾಲಿನ ಡೈರಿ, ನಾಡ ಕಚೇರಿ, ಶಾಲಾ-ಕಾಲೇಜುಗಳ ಜೊತೆಗೊಂದು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಹಾಗೂ ರೈತ ಸಂಪರ್ಕ ಕೇಂದ್ರವನ್ನು ಹೊಂದಿದೆ. ಹಾಸನ-ಮಂಗಳೂರು ನಡುವೆ ರಸ್ತೆ ನಿರ್ಮಾಣವಾಗಬೇಕಾದ್ರೆ ಗ್ರಾಮ ಇಬ್ಭಾಗವಾಯ್ತು. ರಸ್ತೆಯಲ್ಲಿ ವಾಹನ ಸಂಚಾರ ನಿರಂತರವಾಗಿ ಹೆಚ್ಚುತ್ತಾ ಹೋಗಿದ್ರಿಂದ ಅಪಘಾತಗಳು ಹೆಚ್ಚಾಗುತ್ತಾ ಹೋಗಿದೆ. ಅಪಘಾತ ಪೀಡಿತರನ್ನು ಆಲೂರು ಅಥವಾ ಹಾಸನಕ್ಕೆ ಕರೆದೊಯ್ಯುವ ಪರಿಸ್ಥಿತಿ ಉಂಟಾಗಿತ್ತು. ಜೊತೆಗೆ ಆಗ ತುರ್ತು ವಾಹನಗಳ ಸಂಖ್ಯೆ ಕಡಿಮೆ ಇದ್ದಿದ್ದರಿಂದ ಕೆಲವರು ಮಾರ್ಗ ಮಧ್ಯಯಲ್ಲಿಯೇ ಸಾವಿಗೀಡಾಗುತ್ತಿದ್ರು. ಇವೆಲ್ಲವನ್ನು ಗಮನಿಸಿ 5 ದಶಕಗಳ ಹಿಂದೆ ಸರ್ಕಾರ ಈ ಗ್ರಾಮಕ್ಕೊಂದು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ನೀಡಿತು. ಅಲ್ಲಿಂದ ಇಲ್ಲಿಯತನಕ ಆಸ್ಪತ್ರೆ ಒಂದಲ್ಲ ಒಂದು ರೀತಿಯಲ್ಲಿ ಬದಲಾವಣೆಗೊಳ್ಳುತ್ತಾ ಬಂದಿದೆ. ಆದರೆ ಕಳೆದ 20 ವರ್ಷಗಳ ಈಚೆಗೆ ಈ ಆಸ್ಪತ್ರೆ ಜಿಲ್ಲೆಯಲ್ಲಿಯೇ ಹೆಸರು ಮಾಡಿದೆ. ಇದಕ್ಕೆಲ್ಲಾ ಕಾರಣ ಈ ಮಹಿಳಾ ವೈದ್ಯೆ.
ಇವರು ಡಾ. ನಿಸಾರ್ ಫಾತಿಮಾ. ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನವರು. ಕಳೆದ 20 ವರ್ಷಗಳ ಹಿಂದೆ ಈ ಗ್ರಾಮಕ್ಕೆ ಕಿರಿಯ ವೈದ್ಯೆಯಾಗಿ ಬಂದವರು. ಇವರು ಬಂದಂತಹ ದಿನಗಳಲ್ಲಿ ಈ ಆಸ್ಪತ್ರೆಗೆ ಸರಿಯಾದ ನಾಮಫಲಕವೂ ಇರಲಿಲ್ಲ. ಕೆಲವರಿಗೆ ಆಸ್ಪತ್ರೆಯ ಹಿಂಭಾಗ ಇಸ್ಪೀಟ್ ಅಡ್ಡೆಯೂ ಆಗಿತ್ತು. ಫಾತಿಮಾ ಅಧಿಕಾರ ವಹಿಸಿಕೊಂಡ ಕೆಲವೇ ದಿನದಲ್ಲಿ ಮೊದಲು ಮಾಡಿದ ಕೆಲಸ ಅಂದರೆ ಆಸ್ಪತ್ರೆಗೆ ಬಣ್ಣ ಬಳಿಸಿದ್ದು. ಇಷ್ಟೇ ಅಲ್ಲದೆ ಆಸ್ಪತ್ರೆಯ ಸುತ್ತಲೂ ಒಂದು ಕಾಂಪೌಂಡ್ ನಿರ್ಮಿಸಿ ಉಳಿದ ಜಾಗದಲ್ಲಿ ಕೆಲ ಅಲಂಕೃತ ಹೂ ಗಿಡಗಳನಿಟ್ಟು ಬೆಳೆಸಿದ್ದು, ಈಗ ಈ ಆಸ್ಪತ್ರೆಯಲ್ಲಿ ಉಗುಳುವುದಿರಲಿ ಗೋಡೆಗೆ ಒರಗಿ ನಿಂತರೂ ನಮ್ಮ ಬಗ್ಗೆ ನಮಗೆ ಬೇಸರ ಮೂಡಿಸುತ್ತದೆ. ಕಸ ಎಸೆಯಲೂ ಕೂಡ ಮನಸ್ಸು ಬರೋದಿಲ್ಲ. ಅಷ್ಟು ಸ್ವಚ್ಛವಾಗಿದೆ ಈ ಆಸ್ಪತ್ರೆ. ಈ ಪಾಳ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಸಾಮಾನ್ಯ ವರ್ಗದವರಿಗೂ ಉತ್ತಮ ಸೌಲಭ್ಯ ಸಿಗುತ್ತದೆ. ಇನ್ನು ವಿಶೇಷ ವಾರ್ಡ್ ನೋಡಿದರಂತೂ ಇದೇನು ಸರ್ಕಾರಿ ಆಸ್ಪತ್ರೆಯೋ ಅಥವಾ ಖಾಸಗಿ ಆಸ್ಪತ್ರೆಯೋ ಎಂಬ ಭಾವನೆ ಮೂಡುತ್ತದೆ.
ಆಸ್ಪತ್ರೆಯ ಒಳಗೆ ರೋಗಿಗಳು ಕಾಲಿಡುತ್ತಿದ್ದಂತೆ ಗ್ರಂಥಾಲಯಕ್ಕೆ ಬಂದಂತೆ ಭಾಸವಾಗುತ್ತದೆ. ಯಾಕಂದ್ರೆ ಗೋಡೆಗಳ ಮೇಲೆ ಕನ್ನಡದ ಬರಹಗಳು, ರೋಗಗಳ ಬಗ್ಗೆ ಎಚ್ಚರ ವಹಿಸುವ ಸೂಚನಾ ಫಲಕಗಳು, ವಿವಿಧ ರೋಗಗಳ ಗುಣಲಕ್ಷಣಗಳು ಮತ್ತು ಅದಕ್ಕೆ ಬೇಕಾದ ಚಿಕಿತ್ಸೆ ಹೀಗೆ ನೂರಾರು ಗೋಡೆ ಬರಹಗಳನ್ನು ನೋಡಬಹುದಾಗಿದೆ. ಇವರಿಗೆ ಕನ್ನಡದ ಬಗ್ಗೆ ಇರುವ ಪ್ರೀತಿಯನ್ನು ಆಸ್ಪತ್ರೆಯ ಗೋಡೆಗಳೇ ಹೇಳುತ್ತವೆ.
ಇಂದು ಎಲ್ಲಾ ಆಸ್ಪತ್ರೆಗಳಲ್ಲಿಯೂ ಗರ್ಭಿಣಿಯರಿಗೆ ಸಿಜೇರಿಯನ್ ಮಾಡುವುದು ಸಾಮಾನ್ಯ. ಆದ್ರೆ ಇಲ್ಲಿ ಮಾತ್ರ ಸಿಜೇರಿಯನ್ ಮಾಡಿಸೋದೇ ಇಲ್ಲ. ಇಲ್ಲಿಗೆ ಬಂದು ದಾಖಲಾದ ಶೇ. 100ಕ್ಕೆ ನೂರರಷ್ಟು ಗರ್ಭಿಣಿಯರಿಗೆ ಸಹಜ ಹೆರಿಗೆ ಮಾಡಿಸಲಾಗುತ್ತದೆ. ಹಾಗಾಗಿ ಪಾಳ್ಯದ ಸುತ್ತಮುತ್ತಲಿನಿಂದ ಅಷ್ಟೇ ಅಲ್ಲದೆ ಹೊರ ಜಿಲ್ಲೆಗಳಿಂದಲೂ ಇಲ್ಲಿಗೆ ಗರ್ಭೀಣಿಯರು ಬಂದು ಇವರ ಬಳಿ ಚಿಕಿತ್ಸೆ ಪಡೆಯುತ್ತಾರೆ. ಖಾಸಗಿ ಆಸ್ಪತ್ರೆಗೆ ಹೋಗಿದ್ದವರು ಕೂಡ ನಂತರ ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುವುದು ವಿಶೇಷ. ಪಾಳ್ಯ ಆಸ್ಪತ್ರೆಗೆ ಬಂದ ಬಳಿಕ ಇವರು ರೋಗಿಗಳನ್ನ ತಮ್ಮ ಆತ್ಮೀಯರಂತೆ ಕಂಡು ಚಿಕಿತ್ಸೆ ನೀಡುತ್ತಿದ್ದಾರೆ. ಅವರು ಬಂದ ತಕ್ಷಣ ಬಂಧುಗಳ ರೀತಿಯಲ್ಲಿ ಬರಮಾಡಿಕೊಂಡು ಅವರೊಂದಿಗೆ ಆಪ್ತ ಸಮಾಲೋಚನೆ ನಡೆಸುತ್ತಾರೆ.
1999ರಿಂದ 2020ರ ನಡುವೆ ಈ ಆಸ್ಪತ್ರೆಯಲ್ಲಿ ಒಟ್ಟು 10 ಸಾವಿರಕ್ಕೂ ಅಧಿಕ ಸಹಜ ಹೆರಿಗೆ ಮಾಡಿಸುವ ಮೂಲಕ ಮತ್ತೊಂದು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಈ ನಿಸಾರ್ ಫಾತಿಮಾ. ಇಷ್ಟೇ ಅಲ್ಲದೆ 8 ಮಂದಿಗೆ ಅವಳಿ ಮಕ್ಕಳ ಹೆರಿಗೆ ಮಾಡಿಸಿರುವುದು ಮತ್ತೊಂದು ವಿಶೇಷ. ಪ್ರತಿ ತಿಂಗಳು 40ಕ್ಕೂ ಹೆಚ್ಚು ಹೆರಿಗೆಯಾಗುತ್ತೆ. ಅದ್ರಲ್ಲೂ 8 ಅವಳಿ ಮಕ್ಕಳು ಸಹಜ ಹೆರಿಗೆ ಮೂಲಕ ಇದೇ ಆಸ್ಪತ್ರೆಯಲ್ಲಿ ಜನ್ಮ ಪಡೆದಿರುವುದು ಮತ್ತೊಂದು ವಿಶೇಷ.
ಡಾ. ನಿಸಾರ್ ಫಾತಿಮಾ ಈ ಬಗ್ಗೆ ಹೇಳುವಂತೆ, "ಆತ್ಮಸ್ಥೈರ್ಯವಿದ್ದು, ನಾವು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ ಅಂದರೆ ನಮ್ಮನ್ನು ರೋಗಿಗಳು ಹುಡುಕಿಕೊಂಡು ಬರುತ್ತಾರೆ. ಯಾವುದೇ ಸಮಯದಲ್ಲೂ ತುರ್ತು ಚಿಕಿತ್ಸೆ ನೀಡುವ ವ್ಯವಸ್ಥೆ ಸರಿಯಾಗಿ ಮಾಡಿದ್ರೆ ನಾವು ಮಾಡುವ ಕೆಲಸ ಉತ್ತಮವಾಗಿರುತ್ತದೆ. ಪ್ರಾಮಾಣಿಕತೆಯೊಂದಿದ್ದರೆ ಸಾಲದು, ಸಕಾರಾತ್ಮಕ ಚಿಕಿತ್ಸೆ ಕೂಡ ನೀಡಬೇಕು. ಗುಣಮಟ್ಟದಲ್ಲಿ ಖಾಸಗಿ ಆಸ್ಪತ್ರೆಗಳನ್ನೂ ಮೀರಿಸುವ ಪಾಳ್ಯ ಆಸ್ಪತ್ರೆ ಜನರ ವಿಶ್ವಾಸವನ್ನು ಗಳಿಸಿದೆ. ಯಾವ ಖಾಸಗಿ ಸಂಸ್ಥೆಗೂ ಕಡಿಮೆಯಿಲ್ಲದಂತೆ ಆಸ್ಪತ್ರೆಯನ್ನು ನವೀಕರಿಸಿದ್ದೇವೆ. ಆಸ್ಪತ್ರೆಯಲ್ಲಿ ಸುಸಜ್ಜಿತ ಹೊರರೋಗಿಗಳ ಕೊಠಡಿ, ಗರ್ಭಿಣಿಯರಿಗೆ ವಿಶೇಷ ಕೊಠಡಿ, ಪ್ರತ್ಯೇಕ ಪ್ರಸೂತಿ ಕೊಠಡಿ, ಬೇಬಿ ವಾರ್ಡ್ ಹೀಗೆ ಎಲ್ಲವನ್ನು ಒಳಗೊಂಡಿದೆ. ಈ ಪ್ರಾಥಮಿಕ ಆರೋಗ್ಯ ಕೇಂದ್ರ ಕಳೆದ 10 ವರ್ಷಗಳ ಹಿಂದೆ 24/7 ಆಸ್ಪತ್ರೆಯಾಗಿ ಪರಿವರ್ತನೆಗೊಂಡಿದೆ. ಇಲ್ಲಿಗೆ ಬಂದು 20 ವರ್ಷಗಳು ಕಳೆದಿವೆ. ಸಹಜ ಹೆರಿಗೆಗೆ ಈ ಆಸ್ಪತ್ರೆ ಹೆಸರು ಮಾಡಿದ್ದು, ರಾಜ್ಯಕ್ಕೆ ಮಾದರಿಯಾಗಿದೆ. ಆದ್ರೆ ಸರ್ಕಾರದಿಂದ ಇನ್ನೂ ಹೆಚ್ಚಿನ ಸೌಲಭ್ಯ ನೀಡಬೇಕು. ಇಲ್ಲಿಗೊಂದು ಲ್ಯಾಬ್, ಸ್ಕ್ಯಾನಿಂಗ್ ಸೌಕರ್ಯದ ಜೊತೆಗೆ ಮತ್ತೊಬ್ಬ ವೈದ್ಯರ ಅವಶ್ಯಕತೆ ಇದೆ" ಎನ್ನುತ್ತಾರೆ ಫಾತಿಮಾ.
ರಾಷ್ಟ್ರಿಯ ಹೆದ್ದಾರಿಯಲ್ಲಿಯೇ ಈ ಆಸ್ಪತ್ರೆ ಇರುವುದರಿಂದ ಅಪಘಾತಗಳು ಸಂಭವಿಸಿದರೂ ತಕ್ಷಣ ಚಿಕಿತ್ಸೆ ನೀಡಲಾಗುತ್ತದೆ. ಡಾ. ಫಾತಿಮಾ ಗರ್ಭಿಣಿಯರಿಗೆ ಅಷ್ಟೇ ಅಲ್ಲದೆ ಹೊರರೋಗಿಗಳಿಗೂ ಉತ್ತಮ ಚಿಕಿತ್ಸೆ ನೀಡ್ತಾರೆ.
ಡಾ. ಫಾತಿಮಾ ವೈದ್ಯ ಲೋಕಕ್ಕೆ ಮಾದರಿಯಾಗಿದ್ದಾರೆ. ಇವರು ಉತ್ತಮ ಚಿಕಿತ್ಸೆ ನೀಡುವ ಮೂಲಕ ಸಣ್ಣಪುಟ್ಟ ಹೆಜ್ಜೆಗಳನ್ನಿಡುತ್ತಾ ಇಚ್ಛಾಶಕ್ತಿ ಇದ್ರೆ ಬದಲಾವಣೆ ದೊಡ್ಡ ವಿಷಯವೇ ಅಲ್ಲ ಎನ್ನುವ ಮಾರ್ಗ ಕಂಡುಕೊಂಡವರು. ಕೆಲವು ಸರ್ಕಾರಿ ಆಸ್ಪತ್ರೆಗಳನ್ನು ಕೆಲ ವೈದ್ಯರು ತಮ್ಮ ಅನುಕೂಲಕ್ಕೆ ಬಳಸಿಕೊಂಡು ಹಣ ಸುಲಿಗೆ ಮಾಡುತ್ತಿರುವ ಅದೆಷ್ಟೋ ಉದಾಹರಣಗಳನ್ನು ಕಂಡಿದ್ದೇವೆ. ಆದ್ರೆ ಖಾಸಗಿ ಆಸ್ಪತ್ರೆಗಳ ನಡುವೆಯೂ ಇಂತಹದೊಂದು ಸರ್ಕಾರಿ ಆಸ್ಪತ್ರೆ ಹೆಸರುವಾಸಿಯಾಗಿರೋದು ಹೆಮ್ಮೆಯ ವಿಷಯವೇ ಸರಿ.