ಹಾಸನ: ಖಾಸಗಿ ಆಸ್ಪತ್ರೆಗೆ ಬರುವ ಕೊರೊನಾ ಸೋಂಕಿತರಿಗೆ ಲಕ್ಷಾಂತರ ರೂ. ಠೇವಣಿ ಕಟ್ಟುವಂತೆ ಬೇಡಿಕೆಗಳನ್ನು ಇಡಲಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರತಿನಿತ್ಯ ನೂರಾರು ಜನರಿಗೆ ಕೊರೊನಾ ಸೋಂಕು ಹರಡುತ್ತಿದೆ. ಹಾಸನ ಜಿಲ್ಲಾ ಆಸ್ಪತ್ರೆ ಮತ್ತು ಧರ್ಮಸ್ಥಳ ಆಯುರ್ವೇದಿಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆಂದು ವ್ಯವಸ್ಥೆ ಮಾಡಿರುವುದು ಸ್ವಾಗತಾರ್ಹ. ಆದರೆ ಖಾಸಗಿ ಆಸ್ಪತ್ರೆಗಳಿಗೆ ಕೊರೊನಾ ಸೋಂಕಿತರು ಬಂದರೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ಬೇರೆ ರೋಗಿಗಳನ್ನೂ ಕೋವಿಡ್ ರೋಗಿಗಳಂತೆ ಕಂಡು ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಅವರು ಮೃತಪಟ್ಟ ಸಾಕಷ್ಟು ಪ್ರಕರಣಗಳು ನಡೆದಿದೆ. ಕೊರೊನಾ ಲಕ್ಷಣಗಳು ಏನಾದರೂ ರೋಗಿಗಳಲ್ಲಿ ಕಂಡು ಬಂದರೆ ಲಕ್ಷಾಂತರ ರೂ. ಠೇವಣಿ ಕಟ್ಟುವಂತೆ ಬೇಡಿಕೆ ಇಡಲಾಗುತ್ತಿದೆ ಎಂದು ಆಪಾದಿಸಿದರು.
ಸರ್ಕಾರ ಕೋವಿಡ್ ವಿರುದ್ಧದ ಹೋರಾಟದಲ್ಲಿ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ. ಆದರೆ ಕೋವಿಡ್ ರೋಗಿಗಳಿಗೆ ಸರ್ಕಾರ ನೀಡುತ್ತಿರುವ ವಿಶೇಷ ಸವಲತ್ತುಗಳು ಖಾಸಗಿ ಆಸ್ಪತ್ರೆಗಳಲ್ಲಿ ಸಿಗುತ್ತಿಲ್ಲ. ಸರ್ಕಾರದ ಆದೇಶಗಳಿಗೆ ಕಡವೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ ಎಂದು ಕಿಡಿಕಾರಿದರು.
ಒಬ್ಬ ಕೊರೊನಾ ಸೋಂಕಿತ ಖಾಸಗಿ ಆಸ್ಪತ್ರೆಗೆ ದಾಖಲಾದರೆ ಹಣ ಪಾವತಿ ಬಗ್ಗೆ ನಿಗದಿತ ದರದ ಪಟ್ಟಿಯನ್ನು ಖಾಸಗಿ ಆಸ್ಪತ್ರೆಯವರು ಪ್ರವೇಶ ದ್ವಾರದಲ್ಲಿ ಪ್ರಕಟಿಸಬೇಕು ಎಂದು ಒತ್ತಾಯಿಸಿದ್ದು, ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ಒಂದು ವಾರದ ಗಡುವು ನೀಡಿ ಎಚ್ಚರಿಸಿದರು.