ಸಕಲೇಶಪುರ(ಹಾಸನ): ಗ್ರಾಮೀಣ ಕೂಟ ಮೈಕ್ರೋ ಫೈನಾನ್ಸ್ ಸಂಸ್ಥೆಯು ಕೋವಿಡ್-19 ವಿರುದ್ಧ ನಿರಂತರವಾಗಿ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್ ಸೇವೆ ಗುರುತಿಸಿ ಅವರ ಸಣ್ಣಪುಟ್ಟ ಅಗತ್ಯಗಳನ್ನ ಪೂರೈಸುತ್ತಿದೆ ಎಂದು ಮೈಕ್ರೋ ಫೈನಾನ್ಸ್ನ ವಲಯ ವ್ಯವಸ್ಥಾಪಕ ನಾಗಪ್ಪ ಹೇಳಿದ್ದಾರೆ.
ನಗರದ ಪುರಸಭೆ ಆವರಣದಲ್ಲಿ ಸಂಸ್ಥೆ ವತಿಯಿಂದ ಪೌರಕಾರ್ಮಿಕರಿಗೆ ಆಹಾರದ ಕಿಟ್ ವಿತರಿಸಿ ಮಾತನಾಡಿದ ಅವರು, ವಿಶ್ವದಾದ್ಯಂತ ಕೊರೊನಾ ವೈರಸ್ ವ್ಯಾಪಿಸುತ್ತಿದೆ. ಇದನ್ನ ತಡೆಗಟ್ಟಲು ಕೊರೊನಾ ವಾರಿಯರ್ಸ್ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಗ್ರಾಮೀಣ ಕೂಟ ಮೈಕ್ರೋ ಫೈನಾನ್ಸ್ ಸಂಸ್ಥೆ ವತಿಯಿಂದ ಮೊದಲಿಗೆ ಪೊಲೀಸರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಲಾಗಿತ್ತು. ನಂತರ ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಆಶಾ ಕಾರ್ಯಕರ್ತೆಯರಿಗೆ ಕೆಲವು ಕಿಟ್‌ಗಳನ್ನ ನೀಡಲಾಗಿತ್ತು. ಇದೀಗ ಪೌರ ಕಾರ್ಮಿಕರಿಗೆ ಆಹಾರದ ಕಿಟ್ ನೀಡಲಾಗುತ್ತಿದೆ ಎಂದರು.
ತಾಲೂಕು ವೈದ್ಯಾಧಿಕಾರಿ ಡಾ.ಮಹೇಶ್ ಮಾತನಾಡಿ, ಪೌರ ಕಾರ್ಮಿಕರು ಕೊರೊನಾ ಬರದಂತೆ ಹೆಚ್ಚಿನ ಎಚ್ಚರಿಕೆವಹಿಸಬೇಕು. ದುಶ್ಚಟಗಳ ಅಭ್ಯಾಸ ಹೊಂದಿದವರಿಗೆ ಕೊರೊನಾ ವೇಗವಾಗಿ ಹಬ್ಬುತ್ತದೆ. ಹೀಗಾಗಿ ಪ್ರತಿಯೊಬ್ಬ ಪೌರ ಕಾರ್ಮಿಕರು ಕೆಲ ದಿನಗಳ ಕಾಲ ಗುಟ್ಕಾ ತಿನ್ನುವುದು, ಮದ್ಯಪಾನ, ಧೂಮಪಾನ ಮಾಡುವುದನ್ನ ನಿಲ್ಲಿಸಬೇಕು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದರು.