ಹಾಸನ: ಅಸಂಘಟಿತ ಕಾರ್ಮಿಕರು ಎಲೆಮರೆ ಕಾಯಿಯಂತಿದ್ದು, ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಹೇಳಿದರು. ನಗರದ ಅಂಬೇಡ್ಕರ್ ಭವನದಲ್ಲಿ ಅಸಂಘಟಿತ ಕಾರ್ಮಿಕರ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಮಿಕ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಒಟ್ಟು ದೇಶೀಯ ಉತ್ಪಾದನೆ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಸೇವಾ ವಲಯ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಈ ವಲಯದಲ್ಲಿ ಸರ್ಕಾರದ ಸವಲತ್ತುಗಳನ್ನು ಪಡೆಯುತ್ತಿರುವ ಸಂಘಟಿತ ಕಾರ್ಮಿಕರ ಸಂಖ್ಯೆ ಅಸಂಘಟಿತ ಕಾರ್ಮಿಕರ ಸಂಖ್ಯೆಗೆ ಹೋಲಿಸಿದರೆ ತೀರ ಕಡಿಮೆ ಎಂದರು.
ಈ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಹಲವು ಸೌಲಭ್ಯಗಳನ್ನು ಸರ್ಕಾರದ ವತಿಯಿಂದ ನೀಡುತ್ತಿರುವುದು ಹಾಗೂ ಅಸಂಘಟಿತ ನೌಕರರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಪ್ರಶಂಸನೀಯ ಎಂದರು. ಕರ್ನಾಟಕ ಸರ್ಕಾರವು 2019ನೇ ಸಾಲಿನಲ್ಲಿ ಮಾರ್ಚ್ 1 ರಂದು ಅಸಂಘಟಿತ ಕಾರ್ಮಿಕರ ದಿನವನ್ನಾಗಿ ಆಚರಿಸುವಂತೆ ಆದೇಶ ನೀಡಿದೆ. ಆ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಎರಡನೇ ಬಾರಿ ಅಸಂಘಟಿತ ಕಾರ್ಮಿಕರ ದಿನವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.