ಹಾಸನ: ಡಿ.ಕೆ. ಶಿವಕುಮಾರ್ ಅವರು ನಿನ್ನೆ ಅಧಿಕಾರ ವಹಿಸಿಕೊಂಡ ಬಳಿಕ ಅಧಿಕಾರಕ್ಕೆ ಚಪ್ಪಡಿ ಹಾಕುತ್ತೇನೆ ಎಂದಿದ್ದಾರೆ. ಮುಂದಿನ ದಿನದಲ್ಲಿ ಅವರು ಯಾರ ಮೇಲೆ ಚಪ್ಪಡಿ ಹಾಕ್ತಾರೋ ಗೊತ್ತಿಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ವ್ಯಂಗ್ಯವಾಡಿದರು.
ಜಿಲ್ಲೆಯ ಸಕಲೇಶಪುರ ತಾಲೂಕಿನ ಮಂಜ್ರಾಬಾದ್ ಕೋಟೆ ವೀಕ್ಷಣೆಯ ಬಳಿಕ ಡಿಕೆಶಿ ಪಟ್ಟಾಭಿಷೇಕದ ಬಗ್ಗೆ ಮಾತನಾಡಿದ ಅವರು, ಅದು ಅವರ ಪಕ್ಷದ ವೈಯಕ್ತಿಕ ಕಾರ್ಯಕ್ರಮ. ಡಿಕೆಶಿ ಅವರನ್ನು ನಾನು ಹತ್ತಿರದಿಂದ ನೋಡಿರುವೆ. ಅವರ ಕ್ಷೇತ್ರದಲ್ಲಿ ಅವರನ್ನು ಬಿಟ್ಟು ಬೇರೆ ಯಾರು ಗೆಲ್ಲುವುದಕ್ಕೆ ಆಗಿಲ್ಲ. ಆದರೆ, ಡಿ.ಕೆ.ಶಿವಕುಮಾರ್ ಅವರ ರಾಜಿ ರಾಜಕಾರಣದಿಂದ ಕಾಂಗ್ರೆಸ್ ನೆಲ ಕಚ್ಚಿದೆ ಎಂದು ಅವರ ಪಕ್ಷದ ಹಿರಿಯ ಮುಂಖಡರಾದ ಸಿ.ಎಂ. ಲಿಂಗಪ್ಪ ಅವರು ಒಮ್ಮೆ ಅವರ ಬಗ್ಗೆ ಆರೋಪ ಮಾಡಿದ್ದರು. ಇದು ನನ್ನ ಮಾತಲ್ಲ ಅವರದ್ದು. ಅಧಿಕಾರಕ್ಕೆ ಚಪ್ಪಡಿ ಹಾಕುತ್ತೇನೆ ಎಂದಿದ್ದಾರೆ. ಮುಂದಿನ ದಿನದಲ್ಲಿ ಅವರು ಯಾರ ಮೇಲೆ ಚಪ್ಪಡಿ ಹಾಕ್ತಾರೋ ಗೊತ್ತಿಲ್ಲ ಎಂದರು.
ಚಿಕ್ಕಮಗಳೂರಿಗೆ ಕಂದಾಯ ಸಚಿವ ಆರ್.ಅಶೋಕ್ ಹಾಗೂ ಬೃಹತ್ ಮತ್ತು ಮದ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು ಪ್ರವಾಸದ ನಿಮಿತ್ತ ಜಿಲ್ಲೆಗೆ ಬಂದಿದ್ದರು. ಅವರಿಗೆ ಗೌರವ ಸೂಚಿಸುವುದು ನನ್ನ ಕರ್ತವ್ಯ. ಅವರಿಗೆ ಸ್ವಾಗತ ಕೋರಿದ್ದೇನೆ. ಜೊತೆಗೆ ಅವರ ಹುಟ್ಟುಹಬ್ಬಕ್ಕೆ ಶುಭಕೋರಬೇಕಿತ್ತು. ಅದನ್ನ ಮಾಡಿದ್ದು ಸತ್ಯ ಎಂದರು.
ಪಾರ್ಟಿಗೆ ಈಶ್ವರಪ್ಪ ಬಂದಿದ್ದು ನನಗೆ ತಿಳಿದಿಲ್ಲ. ನಾನು ಇಬ್ಬರನ್ನ ಭೇಟಿ ಮಾಡಿದ್ದು ಸತ್ಯ. ಆರ್.ಅಶೋಕ್ ಮಧ್ಯಾಹ್ನ 3ಕ್ಕೆ ಬಂದರು. ಜಗದೀಶ್ ಶೆಟ್ಟರ್ ರಾತ್ರಿ 8ಕ್ಕೆ ಆಗಮಿಸಿದರು. ಅವರಿಬ್ಬರಿಗೆ ಸ್ವಾಗತ ಕೋರಿ ನಾನು ವಾಪಸ್ ಮನೆಗೆ ಬಂದೆ. ಬಳಿಕ ಈಶ್ವರಪ್ಪ ಬಂದ್ರೋ ಬಿಟ್ಟರೋ ನನಗೆ ತಿಳಿಯದು. ಇನ್ನ ಮುಂದಿನದು ಮಾಧ್ಯಮದವರ ಸೃಷ್ಠಿ ಎಂದು ಉತ್ತರಿಸಿ ಗೊಂದಲಕ್ಕೆ ತೆರೆ ಎಳೆದರು.