ಹಾಸನ : ಮನೆಯ ಭೋಗ್ಯಕ್ಕಿದ್ದ (ಬಾಡಿಗೆದಾರ) ಮಹಿಳೆಯ ಕಿರುಕುಳ ತಾಳಲಾರದೇ ಮನನೊಂದು ಮನೆಯ ಮಾಲೀಕ ಆತ್ಮಹತ್ಯೆ ಮಾಡಿಕೊಂಡರೆ, ಈಕೆಯ ತಾಯಿ ಹೃದಯಘಾತದಿಂದ ಸಾವನ್ನಪ್ಪಿದ ಘಟನೆ ನಗರದ ದಾಸರಕೊಪ್ಪಲಿಯಲ್ಲಿ ನಡೆದಿದೆ.
ಮನೆಯಲ್ಲಿ ಭೋಗ್ಯಕ್ಕಿದ್ದ ಮಹಿಳೆ ನಿತ್ಯ ಮನೆ ಮಾಲೀಕರಿಗೆ ಕಿರುಕುಳ ನೀಡಿದ್ದಲ್ಲದೇ ಹಲ್ಲೆ ಮಾಡಲು ಕೂಡ ಮುಂದಾಗಿದ್ದರಂತೆ. ಇದರಿಂದ ಮನನೊಂದ ಲಲಿತಮ್ಮ (55) ಕಳೆ ನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತಿ ನಾಗರಾಜ್ ಆರೋಪಿಸಿದ್ದಾರೆ. ಇನ್ನು ಮಗಳು ಮೃತಪಟ್ಟ ವಿಚಾರ ಕೇಳಿದ ಮೃತ ಲಲಿತಮ್ಮ ಅವರ ತಾಯಿ ಲಕ್ಷ್ಮಮ್ಮ(74) ಎಂಬುವರಿಗೆ ಹೃದಯಾಘಾತವಾಗಿದ್ದು, ಕಳೆದ ರಾತ್ರಿ ಸಾವನಪ್ಪಿದ್ದಾರೆ. ಯಾರೋ ಮಾಡಿದ ತಪ್ಪಿಗೆ ತಾಯಿ - ಮಗಳು ಜೀವ ಕಳೆದುಕೊಂಡಂತಾಗಿದೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದು, ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಎಸ್ ಪಿ ಹರಿರಾಮ್ ಶಂಕರ್, "ದಾಸರಕೊಪ್ಪಲು ತಿರುಮಲ ಕಲ್ಯಾಣ ಮಂಟಪದ ಮುಂಭಾಗ ಲಲಿತಮ್ಮ ಹಾಗೂ ಪತಿ ನಾಗರಾಜು ವಾಸವಾಗಿರುವುದರ ಜೊತೆಗೆ ಬಾಡಿಗೆ, ಭೋಗ್ಯಕ್ಕಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದರು. ಕೆಳಭಾಗದ ನೆಲ ಮಹಡಿಯಲ್ಲಿ ಲಲಿತಾ ದಂಪತಿ ಹಾಗೂ ಇತರರು ವಾಸವಾಗಿದ್ದರು. ಮೇಲ್ಭಾಗದ ಮನೆಗಳನ್ನು ಬಾಡಿಗೆಗೆ ನೀಡಿದ್ದರು. ಈ ಪೈಕಿ ಎರಡು ವರ್ಷದ ಹಿಂದೆ ಮೊದಲ ಮಹಡಿಯ ಉತ್ತರ ಭಾಗದ ಮನೆಯನ್ನು ಉದ್ದೂರು ಕೊಪ್ಪಲು ಗ್ರಾಮದ ಸುಧಾರಾಣಿ - ನಟರಾಜ ದಂಪತಿಗೆ 5 ಲಕ್ಷ ರೂ. ಹಣ ಪಡೆದು ಮೂರು ವರ್ಷದ ಅವಧಿಗೆ ಭೋಗ್ಯಕ್ಕೆ ನೀಡಲಾಗಿತ್ತು. ಭೋಗ್ಯಕ್ಕೆ ಬಂದ ಒಂದು ವರ್ಷದ ನಂತರ ಸುಧಾರಣಿ ನಟರಾಜ ದಂಪತಿ ವಿನಾಕಾರಣ ಲಲಿತಾ ಅವರೊಂದಿಗೆ ಜಗಳ ತೆಗೆಯುತ್ತಿದ್ದರು. ಜೂ.16 ರಂದು ಚಿನ್ನದ ಸರ ಕದ್ದಿದ್ದೀಯಾ, ಕಳ್ಳಿ ಎಂದು ಜಗಳ ತೆಗೆದು ಲಲಿತಾಗೆ ಬಾಯಿಗೆ ಬಂದಂತೆ ಸುಧಾರಾಣಿ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ" ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ : ಯುವಕನ ಕುತ್ತಿಗೆಗೆ ಹಗ್ಗ ಕಟ್ಟಿ ನಾಯಿಯಂತೆ ಬೊಗಳಲು ಕಿರುಕುಳ : ಭೋಪಾಲ್‌ನಲ್ಲಿ ಕಿಡಿಗೇಡಿಗಳ ದುಷ್ಕೃತ್ಯ
"ಅಂದು ಸಂಜೆ 5.30 ರ ಸುಮಾರಿಗೆ ಪುನಃ ಜಗಳ ತೆಗೆದು ಬಾಯಿಗೆ ಬಂದಂತೆ ಬೈದು ಲಲಿತಾ ಮೇಲೆ ಹಲ್ಲೆ ಮಾಡಲು ನಟರಾಜ ಮತ್ತು ಸುಧಾರಾಣಿ ಮುಂದಾಗಿದ್ದಾರೆ. ಇದರಿಂದ ಬೇಸರಗೊಂಡ ಲಲಿತಾ ಮನೆ ಬಿಟ್ಟು ಹೋಗಿದ್ದು, ಪತಿ ನಾಗರಾಜ ಎಲ್ಲ ಕಡೆ ಹುಡುಕಾಡಿದ್ದಾರೆ. ಜೂ.17 ರಂದು ಬೆಳಗ್ಗೆ ನಂಜದೇವರಕಾವಲು ಗ್ರಾಮದ ಅವರ ಜಮೀನಿನಲ್ಲಿ ಕಳೆನಾಶಕ ಕುಡಿದು ಅರೆ ಪ್ರಜ್ಞಾಸ್ಥಿತಿಯಲ್ಲಿ ಬಿದ್ದಿದ್ದು, ಕೂಡಲೇ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಜೂ.20 ರಂದು ರಾತ್ರಿ ಲಲಿತಾ ಸಾವನ್ನಪ್ಪಿದ್ದಾರೆ. ಮಗಳ ಸಾವಿನ ಸುದ್ದಿ ಕೇಳಿದ ಮೃತರ ಅಮ್ಮ ಕೂಡ ಆಘಾತಕ್ಕೆ ಒಳಗಾಗಿ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ" ಎಂದು ಎಸ್ಪಿ ಪ್ರಕರಣದ ಮಾಹಿತಿ ನೀಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಲಲಿತಾ ಅವರ ಮನೆಯಲ್ಲಿ ಭೋಗ್ಯಕ್ಕಿದ್ದ ಸುಧಾರಾಣಿ ಹಾಗೂ ಆಕೆಯ ಪತಿ ನಟರಾಜ ಅವರನ್ನು ವಶಕ್ಕೆ ಪಡೆದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ : 'ದಯವಿಟ್ಟು ನನಗೆ ದಯಾಮರಣ ನೀಡಿ' : ಆಟೋ ಚಾಲಕನ ಅಳಲು