ಹಾಸನ: ನಮ್ಮನ್ನು ಬದುಕಲು ಬಿಡಿ ಎಂದು ಪ್ರೇಮಿಗಳು ಸೆಲ್ಫಿ ವಿಡಿಯೋ ಮಾಡಿ ಪೋಷಕರನ್ನು ಬೇಡಿಕೊಂಡಿದ್ದಾರೆ.
ಚನ್ನರಾಯಪಟ್ಟಣದ ಜೀವಿತಾ ಹಾಗೂ ರಾಕೇಶ್ ಎಂಬ ಜೋಡಿ ಒಂದೂವರೆ ವರ್ಷದಿಂದ ಪ್ರೀತಿಸುತ್ತಿದ್ದರು. ಅತ್ತೆಯ ಮಗನ ಜೊತೆ ಮದುವೆ ಮಾಡುತ್ತಾರೆ ಎಂದು ಜೀವಿತಾ ತನ್ನ ಪ್ರೇಮಿ ರಾಕೇಶ್ ಜೊತೆ ಮನೆ ಬಿಟ್ಟು ಓಡಿ ಹೋಗಿ ಬಳಿಕ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ.
ಇವರಿಬ್ಬರ ಪ್ರೇಮ ವಿಷಯ ತಿಳಿದಿದ್ದ ಯುವತಿ ಪೋಷಕರು ಮನೆಯಲ್ಲಿ ಚಿತ್ರ ಹಿಂಸೆ ನೀಡುತ್ತಿದ್ದರಂತೆ. ಇದನ್ನು ಸಹಿಸಲಾಗದೆ ತನ್ನ ಪ್ರಿಯಕರಿನಿಗೆ ಕರೆ ಮಾಡಿ ಮನೆಯಿಂದ ಓಡಿ ಬಂದ ಯುವತಿ ಈಗ ರಾಕೇಶ್ ಕೈ ಹಿಡಿದಿದ್ದಾಳೆ. ಆದರೆ, ಇಬ್ಬರಿಗೂ ಯುವತಿ ಪೋಷಕರು ಪ್ರಾಣ ಬೆದರಿಕೆ ಹಾಕಿದ್ದು, ಈ ಜೋಡಿ ಈಗ ಭಯದಲ್ಲಿ ಬದುಕುತ್ತಿದೆ.
ಮನೆಯಿಂದ ಓಡಿ ಬಂದ ಮೇಲೆ ನಾವು ಬಸ್ಸಿನಲ್ಲಿಯೇ ತಿರುಗಾಡುತ್ತಿದ್ದೆವು. ಮೊದಲು ಧರ್ಮಸ್ಥಳಕ್ಕೆ ಹೋಗಿದ್ದೆವು. ಅಲ್ಲಿರಲು ನಮಗೆ ಭಯವಾಯಿತು. ಬಳಿಕ ನಾವು ಬೆಂಗಳೂರಿಗೆ ಬಂದು ರಿಜಿಸ್ಟರ್ ಮದುವೆ ಮಾಡಿಕೊಂಡಿದ್ದೇವೆ. ಆದರೆ, ನನ್ನ ತಂದೆ ರಾಕೇಶ್‍ನನ್ನು ಹೊಡೆದು ನನ್ನನ್ನೂ ಕರೆದುಕೊಂಡು ಹೋಗುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಯುವತಿ ವಿಡಿಯೋದಲ್ಲಿ ತನ್ನ ನೋವು ತೋಡಿಕೊಂಡಿದ್ದಾಳೆ.
ಈ ಬಗ್ಗೆ ಚನ್ನರಾಯಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.