ಸಕಲೇಶಪುರ(ಹಾಸನ): ತಾಲೂಕಿನ ಹೆತ್ತೂರು ಹೋಬಳಿ ಮೂಕನಮನೆ ಗ್ರಾಮದ ವ್ಯಕ್ತಿಯೋರ್ವನಿಗೆ ಭಾನುವಾರ ಕೊರೊನಾ ಪಾಸಿಟಿವ್ ಕಂಡು ಬಂದಿದ್ದು, ಈತ ವನಗೂರು ಗ್ರಾಮದಲ್ಲಿ ತಿರುಗಾಟ ಮಾಡಿದ ಹಿನ್ನೆಲೆಯಲ್ಲಿ ಗ್ರಾಮವನ್ನು ಒಂದು ವಾರದ ಕಾಲ ಸ್ವಯಂಪ್ರೇರಿತವಾಗಿ ಲಾಕ್ಡೌನ್ ಮಾಡಲು ತೀರ್ಮಾನಿಸಲಾಗಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಗ್ರಾಮವೊಂದರಲ್ಲಿದ್ದ ಹೆಂಡತಿ ಮನೆಗೆ ಬೆಂಗಳೂರಿನಿಂದ ಆಗಮಿಸಿದ್ದ ಸೊಂಕಿತ ನಂತರ ತಾಲೂಕಿನ ಹೆತ್ತೂರು ಹೋಬಳಿಯ ಮೂಕನಮನೆಗೆ ತೆರಳಿದ್ದ. ಕೊಡಗಿನಲ್ಲಿದ್ದ ಸಂಧರ್ಭದಲ್ಲಿ ಅಲ್ಲಿನ ವೈದ್ಯಕೀಯ ಸಿಬ್ಬಂದಿ ಈತನ ಸ್ವ್ಯಾಬ್ ಪರೀಕ್ಷೆಗೆ ತೆಗೆದುಕೊಂಡಿದ್ದರು. ಆತನಿಗೆ ಸೊಂಕು ದೃಢವಾದ ಹಿನ್ನೆಲೆಯಲ್ಲಿ ತಾಲೂಕು ಆಡಳಿತಕ್ಕೆ ಸೋಮವಾರಪೇಟೆ ಆರೋಗ್ಯ ಅಧಿಕಾರಿಗಳು ತಾಲೂಕಿನ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಭಾನುವಾರ ಮೂಕನಮನೆಗೆ ಬಂದ ತಾಲೂಕಿನ ಆರೋಗ್ಯ ಸಿಬ್ಬಂದಿ ಆತನನ್ನು ಆ್ಯಂಬುಲೆನ್ಸ್ ಮುಖಾಂತರ ಹಾಸನದ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದರು.
ಮೂಕನಮನೆಗೆ ಹಿಂತಿರುಗುವ ಮೊದಲು ಈತ ವನಗೂರು ಗ್ರಾಮದ ಬೇಕರಿಯೊಂದರಲ್ಲಿ ತಿನಿಸುಗಳ ಜೊತೆಗೆ ತರಕಾರಿ ಸಹ ಕೊಂಡಿದ್ದನು. ಆಲ್ಲದೆ ಕಟಿಂಗ್ ಶಾಪ್‌ವೊಂದರಲ್ಲಿ ಹೇರ್ ಕಟ್ ಸಹ ಮಾಡಿಸಿದ್ದ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾ.ಪಂ ಅಧ್ಯಕ್ಷ ಆನಂದ್ ನೇತೃತ್ವದಲ್ಲಿ ಗ್ರಾಮವನ್ನು ಸ್ಯಾನಿಟೈಸ್ ಮಾಡಲಾಗಿದೆ ಹಾಗೂ ಮುಂಜಾಗೃತಾ ಕ್ರಮವಾಗಿ ಒಂದು ವಾರಗಳ ಕಾಲ ಗ್ರಾಮವನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಲು ವರ್ತಕರು ಹಾಗೂ ಗ್ರಾಮಸ್ಥರು ತೀರ್ಮಾನಿಸಿದ್ದಾರೆ.