ಹಾಸನ: ಜಿಲ್ಲೆಯಲ್ಲಿ ದಿನೇ ದಿನೆ ಕೊರೊನಾ ಹೆಚ್ಚುತ್ತಿದ್ದು, ಇಬ್ಬರು ಪತ್ರಕರ್ತರಿಗೂ ಸೋಂಕು ತಗುಲಿರುವುದು ದೃಢವಾಗಿದೆ.
ಶನಿವಾರ ಆರೋಗ್ಯ ಇಲಾಖೆಯು ಹಾಸನ ನಗರದ ಅರವತ್ತಕ್ಕೂ ಹೆಚ್ಚು ಪತ್ರಕರ್ತರ ಗಂಟಲು ದ್ರವವನ್ನು ಪರೀಕ್ಷೆ ಮಾಡಿದ್ದು, ಅದರಲ್ಲಿ ಒಬ್ಬ ವರದಿಗಾರ ಮತ್ತು ಮತ್ತೋರ್ವ ಛಾಯಾಗ್ರಾಹಕನಿಗೆ ಸೋಂಕು ತಗಲಿರುವುದು ದೃಢವಾಗಿದೆ. ಹೀಗಾಗಿ ಅವರಿಬ್ಬರನ್ನು ಹಾಸನದ ಕೋವಿಡ್-19 ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗಂಟಲು ದ್ರವ ಪರೀಕ್ಷೆ ಮಾಡಿಸಿದ ಬಳಿಕ ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದ ಪತ್ರಕರ್ತರು ಹಲವರ ಜೊತೆ ಒಡನಾಟದಲ್ಲಿದ್ದರು ಎನ್ನಲಾಗಿದೆ. ಇದಲ್ಲದೆ ಮೊನ್ನೆ ಮೃತಪಟ್ಟ ವ್ಯಕ್ತಿಯೋರ್ವನ ಶವ ಸಂಸ್ಕಾರದ ವೇಳೆ ಕೂಡ ಭಾಗವಹಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆ ಇವರ ಒಡನಾಟದಲ್ಲಿದ್ದ ಸುಮಾರು ಹತ್ತಕ್ಕೂ ಹೆಚ್ಚು ಪತ್ರಕರ್ತರನ್ನು ಹಾಸನ ನಗರದ ರೆಡ್ಕ್ರಾಸ್ ಸಂಸ್ಥೆಯಲ್ಲಿ ಜಿಲ್ಲಾಡಳಿತ ಕ್ವಾರಂಟೈನ್ ಮಾಡಿದ್ದು, ಅವರಿಗೆ ಮತ್ತೊಂದು ಸುತ್ತಿನ ಕೋವಿಡ್ ಪರೀಕ್ಷೆಗೆ ಸೂಚನೆ ನೀಡಲಾಗಿದೆ.
ಪತ್ರಕರ್ತರಿಗೆ ಸೋಂಕು ತಗಲಿರುವ ಹಿನ್ನೆಲೆ ಹಾಸನ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯನ್ನು ಸ್ಯಾನಿಟೈಸ್ ಮಾಡುವ ಉದ್ದೇಶದಿಂದ ತಾತ್ಕಾಲಿಕವಾಗಿ ಏಳು ದಿನಗಳ ಕಾಲ ಸೀಲ್ ಡೌನ್ ಮಾಡುವಂತೆ ಜಿಲ್ಲಾಡಳಿತ ಸೂಚಿಸಿದೆ.