ಸಕಲೇಶಪುರ: ತಾಲೂಕಿನ ಗುಲಗಳಲೆಯಲ್ಲಿ ಕೊರೊನಾ ಕೇಸ್ ಪತ್ತೆಯಾದ ಹಿನ್ನೆಲೆಯಲ್ಲಿ ಗ್ರಾಮವನ್ನು ಸೀಲ್ ಡೌನ್ ಮಾಡಲಾಗಿದೆ.
ಪಟ್ಟಣದ ಹೋಟೆಲ್ ವೊಂದರಲ್ಲಿ ವ್ಯವಸ್ಥಾಪಕರಾಗಿದ್ದ 39 ವರ್ಷದ ವ್ಯಕ್ತಿಯೊಬ್ಬರಿಗೆ ಕೊರೊನಾ ದೃಢಪಟ್ಟಿದೆ. ಇವರನ್ನು ಹಾಸನದ ಕೋವಿಡ್ ಕೇಂದ್ರಕ್ಕೆ ಕಳುಹಿಸಲಾಗಿದೆ.
ಗುಲಗಳಲೆ ಗ್ರಾಮದಿಂದ ಸಕಲೇಶಪುರ ಕೆಂದನೆ ಸಂಪರ್ಕಿಸುವ ರಸ್ತೆಯನ್ನು ಗ್ರಾಮ ಪಂಚಾಯಿತಿ ವತಿಯಿಂದ ಸೀಲ್ ಡೌನ್ ಮಾಡಿ ಕಂಟೈನ್ ಮೆಂಟ್ ಝೋನ್ ಎಂದು ಘೋಷಿಸಲಾಗಿದೆ.
ಈ ವೇಳೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಜಿ.ಆರ್ ಹರೀಶ್ ಮಾತನಾಡಿ, ಕೊರೊನಾ ಪ್ರಕರಣ ಕಂಡು ಬಂದ ಹಿನ್ನೆಲೆಯಲ್ಲಿ ಗ್ರಾಮವನ್ನು 14 ದಿನಗಳ ಕಾಲ ಸೀಲ್ ಡೌನ್ ಮಾಡಲಾಗುತ್ತದೆ. ಜನರಿಗೆ ಅಗತ್ಯ ವಸ್ತುಗಳನ್ನು ಪಂಚಾಯಿತಿ ವತಿಯಿಂದ ಪೂರೈಸಲಾಗುತ್ತದೆ. ಅಗತ್ಯ ಇರುವವರು ಹಣ ಕೊಟ್ಟು ವಸ್ತುಗಳನ್ನು ಖರೀದಿಸಬಹುದಾಗಿದೆ. ತುರ್ತು ಅಗತ್ಯವಿದ್ದಲ್ಲಿ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗೆ ಕರೆ ಮಾಡಬಹುದು. ಈ ಪ್ರದೇಶದಲ್ಲಿ ಯಾರೂ ಕೂಡ 14 ದಿನಗಳ ಕಾಲ ಮನೆಯಿಂದ ಹೊರ ಬರುವಂತಿಲ್ಲ ಹಾಗೂ ಹೊರಗಿನವರು ಒಳ ಬರುವಂತಿಲ್ಲ ಎಂದರು.
ಈ ಸಂದರ್ಭದಲ್ಲಿ ತಾ.ಪಂ ಸದಸ್ಯ ಯಡೆಹಳ್ಳಿ ಮಂಜುನಾಥ್, ತಾಲೂಕು ವೈದ್ಯಾಧಿಕಾರಿ ಮಹೇಶ್, ಕಂದಾಯ ನಿರೀಕ್ಷಕ ಜನಾರ್ಧನ್ ಸೇರಿದಂತೆ ಮತ್ತಿತರರು ಹಾಜರಿದ್ದರು.