ಹಾಸನ : ಕೋವಿಡ್-19 ವೈರಸ್ ಹರಡುವಿಕೆ ತಡೆಯಲು ಪೊಲೀಸರು ಅದೆಷ್ಟೇ ಜಾಗೃತಿ ಮೂಡಿಸಿದರೂ ಕೂಡ ಅದನ್ನು ಗಾಳಿಗೆ ತೂರಿ ಜನರಿಗೆ ಕೊರತೆ ಇಲ್ಲ. ಅಗತ್ಯ ವಸ್ತುಗಳ ಖರೀದಿ ಹೊರತುಪಡಿಸಿ ಜನರು ಸುಖಾಸುಮ್ಮನೆ ರಸ್ತೆಗಿಳಿಯುವುದನ್ನು ಅರಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ ಗೌಡ ಸ್ವತಃ ತಾವೇ ರಸ್ತೆಗಿಳಿದು ಅರಿವು ಮೂಡಿಸುತ್ತಿದ್ದಾರೆ.
'ಯಾರು ನಿನಗೆ ಬರುವುದಕ್ಕೆ ಹೇಳಿದ್ದು, ನನಗೆ ಸಿಟ್ಟು ಬರುವುದಕ್ಕಿಂತ ಮುಂಚೆ ಇಲ್ಲಿಂದ ಹೋಗು, ಇಲ್ಲ ಅಂದ್ರೆ, ಲಾಠಿ ತಗೋಬೇಕಾಗುತ್ತೆ..' ಎಂದು ಅವರು ಯುವಕನೊಬ್ಬನಿಗೆ ಎಚ್ಚರಿಕೆ ನೀಡುತ್ತಿದ್ದರು.
ರಾತ್ರಿ ಹೊತ್ತಿನಲ್ಲಿ ಮನಸೋ ಇಚ್ಚೆ ತಿರುಗುವಂತಹ ಜನರಿಗೆ ಖಡಕ್ ಸೂಚನೆ ನೀಡುವುದಲ್ಲದೇ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ತಾವೇ ವಾಹನಗಳ ತಪಾಸಣೆ ಮಾಡುತ್ತಿದ್ದಾರೆ. ಕಳೆದ ರಾತ್ರಿ ಸುಮಾರು ಒಂದು ಗಂಟೆಯ ತನಕ ತಮ್ಮ ಕೆಳ ಹಂತದ ಪೊಲೀಸ್ ಸಿಬ್ಬಂದಿಯ ಜೊತೆ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು. ಜೊತೆಗೆ ಎಪಿಎಂಸಿ ಮಾರುಕಟ್ಟೆಗೂ ಭೇಟಿ ಕೊಟ್ಟು ಜನರಿಗೆ ಎಚ್ಚರಿಕೆ ಕೊಟ್ಟರು.
ರೈತರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅರಿವು ಮೂಡಿಸುವ ಕೆಲಸವನ್ನು ಕಳೆದ ಎರಡು, ಮೂರು ದಿನಗಳಿಂದ ಹಿರಿಯ ಪೊಲೀಸ್ ಅಧಿಕಾರಿ ಮಾಡುತ್ತಿದ್ದಾರೆ.