ಹಾಸನ: ಜಿಲ್ಲೆಯ ಎಲ್ಲಾ ತಾಲೂಕು ಹಾಗೂ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳು ಜಂಟಿಯಾಗಿ ಮಂಗನ ಕಾಯಿಲೆ ಕುರಿತು ವ್ಯಾಪಕ ಪ್ರಚಾರ ಮಾಡುವುದರ ಜೊತೆಗೆ ಸಾರ್ವಜನಿಕರಿಗೆ ಅರಿವು ಮೂಡಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಬಿ.ಎ.ಪರಮೇಶ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನಡೆದ ಮಂಗನ ಕಾಯಿಲೆ ತಡೆಗಟ್ಟುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಸಮನ್ವಯ ಸಭೆಯಲ್ಲಿ ಮಾತನಾಡಿದ ಬಿ.ಎ.ಪರಮೇಶ್, ಆರೋಗ್ಯ ಇಲಾಖೆಯು ವಿವಿಧ ಇಲಾಖೆಗಳ ಸಹಕಾರದೊಂದಿಗೆ ಶಾಲೆಗಳಲ್ಲಿ, ಅಂಗನವಾಡಿ ಮತ್ತು ಸ್ತ್ರೀ ಶಕ್ತಿ ಸಂಘಗಳಲ್ಲಿ ಹಾಗೂ ಗ್ರಾಮ ಆರೋಗ್ಯ ಪೌಷ್ಟಿಕ ಸಭೆಗಳಲ್ಲಿ ಆರೋಗ್ಯ ಶಿಕ್ಷಣ ಕಾರ್ಯಕ್ರಮಗಳನ್ನು ನಡೆಸಿ ಮಂಗನ ಕಾಯಿಲೆ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕೆಂದು ಸೂಚಿಸಿದರು.
ಯಾವುದೇ ಪ್ರದೇಶದಲ್ಲಿ ಮಂಗಗಳು ಸತ್ತರೆ ಕೂಡಲೇ ಗ್ರಾಮ ಪಂಚಾಯ್ತಿಗಳಿಗೆ, ಆರೋಗ್ಯಾಧಿಕಾರಿಗಳಿಗೆ ಅಥವಾ ಆರೋಗ್ಯ ಕಾರ್ಯಕರ್ತೆಯರಿಗೆ ಮಾಹಿತಿ ನೀಡುವಂತೆ ಸ್ಥಳೀಯರಿಗೆ ಅರಿವು ಮೂಡಿಸಿ. ಕಾಡಿನ ಸುತ್ತಮುತ್ತಲಿನ ಹಳ್ಳಿಗಳ ಪ್ರತಿ ಮನೆಗೂ ಉಚಿತವಾಗಿ ಡಿ.ಎಂ.ಪಿ ತೈಲವನ್ನು ವಿತರಿಸುವಂತೆ ಬಿ.ಎ.ಪರಮೇಶ್ ಅಧಿಕಾರಿಗಳಿಗೆ ಸೂಚಿಸಿದರು.
ಮಂಗಗಳ ಕಳೇಬರವನ್ನು ಪೋಸ್ಟ್ ಮಾರ್ಟಮ್ ಮಾಡಿ, ವಿಸೆರಾ ಸ್ಯಾಂಪಲ್‍ಗಳನ್ನು ಶಿವಮೊಗ್ಗದ ವಿ.ಡಿ.ಎಲ್. ಲ್ಯಾಬ್‍ಗೆ ಕಳುಹಿಸುವಂತೆ ಪಶುಸಂಗೋಪನಾ ಇಲಾಖಾಧಿಕಾರಿಗಳಿಗೆ ಸೂಚಿಸಿದರು.
ಪ್ರವಾಸಿಗರು ಟ್ರಕ್ಕಿಂಗ್ ತೆರಳದಂತೆ ಮತ್ತು ಕಾಡಿಗೆ ಹೋದರೆ ನಿರೋಧಕಗಳನ್ನು ಬಳಸುವ ಹಾಗೂ ಲಸಿಕೆಗಳ ಬಗ್ಗೆ ಮಾಹಿತಿ ನೀಡುವ ಬೋರ್ಡ್‍ಗಳನ್ನು ಪ್ರವಾಸಿ ತಾಣಗಳಲ್ಲಿ ಹಾಕುವಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಬಿ.ಎ.ಪರಮೇಶ್ ನಿರ್ದೇಶನ ನೀಡಿದರು.