ಹಾಸನ: ನಗರದ ಹೃದಯ ಭಾಗದಲ್ಲಿರುವ ಪ್ರಾಚೀನ ಕೇಂದ್ರ ಗ್ರಂಥಾಲಯಕ್ಕೆ ಜ್ಞಾನದ ದಾಹ ತಣಿಸಿಕೊಳ್ಳಲು ನಿತ್ಯ ಶಿಸ್ತಿನ ಸಿಪಾಯಿಗಳಂತೆ ಹಾಜರಾಗುತ್ತಾರೆ 300ಕ್ಕೂ ಹೆಚ್ಚು ಸ್ಪರ್ಧಾರ್ಥಿಗಳು. ಆದರೆ, ಓದಲು ಪೂರಕ ವಾತಾವರಣವೇ ಇಲ್ಲ. ಇದು ಸ್ಪರ್ಧಾರ್ಥಿಗಳಿಗೆ ಬೇಸರ ತರಿಸಿದೆ.
1.30 ಲಕ್ಷ ಪುಸ್ತಕಗಳಿರುವ ಈ ಗ್ರಂಥಾಲಯದಲ್ಲಿ 13,500 ಮಂದಿ ಸದಸ್ಯತ್ವ ಹೊಂದಿದ್ದಾರೆ. ಪ್ರತಿನಿತ್ಯ 300ಕ್ಕೂ ಹೆಚ್ಚು ಮಂದಿ ಭೇಟಿ ನೀಡುವ ಈ ಗ್ರಂಥಾಲಯದಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ. ಕೊಠಡಿಗಳ ಸಮಸ್ಯೆಯಿಂದಾಗಿ ಎಷ್ಟೋ ಓದುಗರು ಮನೆಗೆ ಮರಳಿರುವ ಉದಾಹರಣೆಗಳೂ ನಡೆದಿವೆ. ಅಷ್ಟೇ ಅಲ್ಲದೆ, ನೂತನ ಪುಸ್ತಕಗಳಿನ್ನಡಲು ಗ್ರಂಥಾಲಯದಲ್ಲಿ ಜಾಗದ ಕೊರತೆಯೂ ಇದೆ.
ಪರ್ಯಾಯವಾಗಿ ಬೇರೆ ಕೊಠಡಿ ಇದ್ದರೂ ಪೂರಕ ವಾತಾವರಣ ಇಲ್ಲದೆ ಓದುಗರು ಸಮಸ್ಯೆ ಎದುರಿಸುವಂತಾಗಿದೆ. ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ವಯೋಮಾನದವರು ಇಲ್ಲಿಗೆ ಬರುತ್ತಾರೆ. ಆದರೆ, ಕೂರಲು ಆಸನದ ಸಮಸ್ಯೆ ಎದುರಾಗಿದೆ. ನಿಂತುಕೊಂಡೇ ದಿನಪತ್ರಿಕೆಗಳನ್ನು ಓದಬೇಕಾಗಿದೆ. ಈ ರೀತಿಯ ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿರುವ ಆಡಳಿತ ವ್ಯವಸ್ಥೆಗೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಈ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಗ್ರಂಥಾಲಯದ ಅಭಿವೃದ್ದಿಗೆ ₹ 2 ಕೋಟಿ ಅನುದಾನ ನೀಡಿದ್ದರು. ವಿವಿಧ ಕಡೆಗಳಿಂದಲೂ ಅನುದಾನ ಬಂದಿದೆ. ಆದರೆ, ಈವರೆಗೂ ಅನುದಾನ ಬಳಕೆ ಮಾಡಿಲ್ಲ. ಇದನ್ನು ಬಳಸಿಕೊಂಡು ಗ್ರಂಥಾಲಯ ಅಭಿವೃದ್ಧಿ ಪಡಿಸುವಂತೆ ಓದುಗರು ಒತ್ತಾಯಿಸಿದ್ದಾರೆ. ಆದರೆ, ಅಧಿಕಾರಿಗಳು ಓದುಗರ ಹಿತದೃಷ್ಟಿಯಿಂದ ಗ್ರಂಥಾಲಯವನ್ನು ಮೇಲ್ದರ್ಜೆಗೆ ಏರಿಸುತ್ತಾರೋ, ಇಲ್ಲವೋ ಎಂಬುದನ್ನು ಕಾದುನೋಡಬೇಕಿದೆ.