ಹಾಸನ: ಬೇಲೂರಿನಲ್ಲಿ ಮಲ್ಲೇಶ್ವರ ಯುವಕ ಸಂಘ ಆಯೋಜಿಸಿದ್ದ ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆಗೆ ಬಿಜೆಪಿ ಜಿಲ್ಲಾ ಅಧ್ಯಕ್ಷ ಹುಲ್ಲಹಳ್ಳಿ ಸುರೇಶ್ ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾ ಅಧ್ಯಕ್ಷ ಹುಲ್ಲಹಳ್ಳಿ ಸುರೇಶ್, ನಾಗರಿಕತೆ ಬೆಳೆದಂತೆ ಸಂಸ್ಕೃತಿಯ ಮೇಲೆ ಪ್ರಹಾರ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ಅಗತ್ಯ ಎಂದು ಅಭಿಪ್ರಾಯಪಟ್ಟರು.
ತಾಲೂಕಿನ ಮುತ್ತುಗನ್ನೆ ಗ್ರಾಮದ ಮಲ್ಲೇಶ್ವರ ಯುವಕ ಸಂಘದಿಂದ ಭಾನುವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸ್ಪರ್ಧಿಗಳು ಭಾಗವಹಿಸಿ ಸಂಭ್ರಮಿಸಿದರು. ಸಾಂಪ್ರದಾಯಿಕ ಎತ್ತಿನ ಬಂಡಿ ಸ್ಪರ್ಧೆ ನೋಡಲು ಬಂದಿದ್ದ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಸವಾರರನ್ನು ಹುರಿದುಂಬಿಸುತ್ತಿದ್ದರು. ಅಕ್ಕಪಕ್ಕದ ಜಿಲ್ಲೆಗಳಾದ ಚಿತ್ರದುರ್ಗ,ಕೋಲಾರ, ಚಿಕ್ಕಮಗಳೂರು, ಹಾಸನ, ಹುಬ್ಬಳ್ಳಿ ಹಾಗೂ ಮಂಡ್ಯ ಸೇರಿ ವಿವಿಧ ಕಡೆಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು.