ಹಾಸನ: ಪ್ರವಾಸಕ್ಕೆಂದು ಬೆಂಗಳೂರಿನಿಂದ ಬಂದಿದ್ದ ನಾಲ್ವರು ಯುವಕರಲ್ಲಿ ಓರ್ವ ಯುವಕ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಸಕಲೇಶಪುರ ತಾಲೂಕಿನ ಮೂಕನ ಮನೆ ಫಾಲ್ಸ್ನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಬೆಂಗಳೂರಿನ ನಿವಾಸಿ ತನುಷ್ (23) ಎಂಬ ಯುವಕ ಮೃತ ದುರ್ದೈವಿ. ಬೆಂಗಳೂರಿನ ತಿಗಳರ ಪಾಳ್ಯದಿಂದ ತನುಷ್, ಪುರುಷೋತ್ತಮ್, ಮನೋಜ್ ಸೇರಿದಂತೆ ನಾಲ್ವರು ಕಳೆದ 2 ದಿನಗಳಿಂದ ಬೈಕ್ನಲ್ಲಿ ಪ್ರವಾಸ ಕೈಗೊಂಡಿದ್ದರು. ಮೊದಲು ಮಡಿಕೇರಿ ಪ್ರವಾಸ ಮುಗಿಸಿ ನಂತರ ಹಾಸನದ ಮೂಕನಮನೆ ಫಾಲ್ಸ್ಗೆ ಬಂದಿದ್ದರು. ಆದರೆ, ಫಾಲ್ಸ್ನಲ್ಲಿ ಬಂಡೆಯಿಂದ ಹರಿಯುತ್ತಿದ್ದ ನೀರಿನ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿರುವಾಗ ತನುಷ್ ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾನೆ.
ಈ ವೇಳೆ ಯುವಕನ ಜೊತೆ ಇದ್ದ ಸ್ನೇಹಿತರು ಆತನನ್ನು ಉಳಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ದುರಾದೃಷ್ಟವಶಾತ್ ಜಾಲಿ ಆಗಿ ಸ್ನೇಹಿತರೊಟ್ಟಿಗೆ ಪ್ರವಾಸಕ್ಕೆ ಬಂದಿದ್ದ ಯುವಕ ಸೆಲ್ಫಿ ಕ್ರೇಜ್ಗೆ ಸಾವನ್ನಪ್ಪಿದ್ದಾನೆ.
ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಸ್ಥಳೀಯರ ಸಹಾಯದಿಂದ ಮೃತದೇಹವನ್ನು ನೀರಿನಿಂದ ಹೊರತೆಗೆದಿದ್ದಾರೆ. ಸದ್ಯ ಈ ಸಂಬಂಧ ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.