ಹಾಸನ: ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡ ಪ್ರಕರಣ ತಾಂತ್ರಿಕ ದೋಷದಿಂದ ಉಂಟಾಗಿದೆ. ನಾಳೆ ತಾಂತ್ರಿಕ ವರ್ಗದವರು ಮತ್ತು ಗುತ್ತಿಗೆ ಪಡೆದ ಕಂಪನಿಯನ್ನು ಪರಿಶೀಲನೆಗೊಳಪಡಿಸಿದ ಬಳಿಕ ನಿಜಾಂಶ ಅಧಿಕೃತವಾಗಿ ಗೊತ್ತಾಗಲಿದೆ ಎಂದು ಸ್ಥಳೀಯ ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದ್ದಾರೆ.
ಸಕ್ಕರೆ ಕಾರ್ಖಾನೆಯ ಬಾಯ್ಲರ್ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕ ಸಿ.ಎನ್. ಬಾಲಕೃಷ್ಣ ಮತ್ತು ವಿಧಾನಪರಿಷತ್ ಸದಸ್ಯ ಗೋಪಾಲಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಬಾಯ್ಲರ್ ಸ್ಟೋಟಗೊಂಡಿದ್ದರಿಂದ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ರೈತರ ಸಂಕಷ್ಟಕ್ಕೆ ಸ್ಪಂದಿಸಿದ ಸರ್ಕಾರ ನಿನ್ನೆ ಪ್ರಾಯೋಗಿಕವಾಗಿ ಕಬ್ಬು ಅರೆಯುವ ಕಾರ್ಯಕ್ಕೆ ಮುಂದಾಗಿದ್ದು, ಅಗ್ನಿ ಸ್ಪರ್ಶ ಮಾಡಲಾಗಿತ್ತು. ಸ್ಪರ್ಶ ಮಾಡಿದ 17 ಗಂಟೆಯ ಬಳಿಕ ಬಾಯ್ಲರ್ ಬಿಸಿಯಾಗಿ ಸ್ಫೋಟಗೊಂಡಿದೆ. ಆದ್ರೆ ಯಾವ ಭಾಗದಲ್ಲಿ ಸ್ಫೋಟಗೊಂಡಿದೆ ಎಂಬುದನ್ನು ತಾಂತ್ರಿಕ ವರ್ಗದವರು ಮತ್ತು ಗುತ್ತಿಗೆ ಪಡೆದ ಕಂಪನಿ ಪರಿಶೀಲನೆ ನಡೆಸಿದ ಬಳಿಕ ಗೊತ್ತಾಗಲಿದೆ ಎಂದು ತಿಳಿಸಿದರು.
ಅಲ್ಲದೇ ಕಾರ್ಮಿಕರು ಯಾರೂ ಇಲ್ಲದ ವೇಳೆ ಇಂತಹ ಘಟನೆ ನಡೆದಿದೆ. ಇಲ್ಲವಾಗಿದ್ದರೆ ನೂರಾರು ಮಂದಿಯ ಪ್ರಾಣ ಹಾನಿಯಾಗುತ್ತಿತ್ತು. ದೇವರು ಎಲ್ಲರನ್ನೂ ಕಾಪಾಡಿದ್ದಾನೆ. ಈ ಬಗ್ಗೆ ನಾಳೆ ಮಧ್ಯಾಹ್ನ ಸಭೆ ಕರೆಯಲಾಗಿದ್ದು, ಕಂಪನಿ ಅವರೊಂದಿಗೆ ಚರ್ಚಿಸಿ ಶೀಘ್ರವಾಗಿ ದುರಸ್ತಿ ಕಾಮಗಾರಿ ಮಾಡುವಂತೆ ಸೂಚಿಸಲಾಗುವುದು ಎಂದರು.