ಹಾಸನ: ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಸಾಮಾಜಿಕ ಸೇವೆಗಳನ್ನು ಮಾಡುತ್ತಾ ಬಂದಿರುವ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ರಕ್ತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದು ಆಲೂರು ತಾಲೂಕು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕಾರ್ಯದರ್ಶಿ ಹಾಗೂ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ರಾಜ್ಯಾಧ್ಯಕ್ಷ ಕೊಟ್ರೇಶ್ ಉಪ್ಪಾರ್ ಅಭಿಪ್ರಾಯಪಟ್ಟರು.
ಹಾಸನದ ಸರ್ಕಾರಿ ಆಸ್ಪತ್ರೆ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಸ್ಕೌಟ್ಸ್ ಭವನದಲ್ಲಿ ವಿಶ್ವ ರಕ್ತದಾನಿಗಳ ದಿನದ ನಿಮಿತ್ತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಅವರು, ಲಾಕ್ಡೌನ್ ಸಂದರ್ಭದಲ್ಲಿ ರಕ್ತದಾನ ಮಾಡಲು ಸಾರ್ವಜನಿಕರು ಹಿಂದು-ಮುಂದು ನೋಡುತ್ತಿದ್ದರು. ಹೀಗಾಗಿ ರಕ್ತದ ಅವಶ್ಯಕತೆ ಇರುವ ಕೆಲವು ಬಡರೋಗಿಗಳು ಅನುಭವಿಸಿದ ಕಷ್ಟ ಹೇಳತೀರದಾಗಿದೆ. ಈ ನಿಟ್ಟಿನಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರೇಂಜರ್ ಮತ್ತು ರೋವರ್ಸ್ ಗಳು ಬಡರೋಗಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ರಕ್ತದಾನಿಗಳ ದಿನವಾದ ಇಂದು ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾದರು ಎಂದು ಹೇಳಿದರು.
ರಕ್ತದಾನ ಓರ್ವ ಮನುಷ್ಯನ ಜೀವವನ್ನು ಉಳಿಸುತ್ತದೆ. ಹಾಗಾಗಿ ರಕ್ತದಾನ ಮಾಡುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ. 18 ವರ್ಷದ ಮೇಲ್ಪಟ್ಟ ಯಾರು ಬೇಕಾದರೂ ರಕ್ತದಾನ ಮಾಡಬಹುದು. ಅತಿ ಹೆಚ್ಚು ರಕ್ತದಾನ ಮಾಡುವ ಮೂಲಕ ಸಾರ್ವಜನಿಕರು ಕೂಡ ನೆರವಾಗಬೇಕು ಎಂದು ಮನವಿ ಮಾಡಿದರು.