ಹಾಸನ: ಗೃಹ ಸಚಿವ ಎಂ.ಬಿ. ಪಾಟೀಲ್ ದಬ್ಬಾಳಿಕೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡುತ್ತಿದ್ದು, ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ನಗರದ ಹೇಮಾವತಿ ಪ್ರತಿಮೆಯಿಂದ ಎನ್.ಆರ್.ವತ್ತದ ಮಾರ್ಗವಾಗಿ ಮೆರವಣಿಯಲ್ಲಿ ಜಿಲ್ಲಾಧಿಕಾರಿ ಕಚೇರಿ ತಲುಪಿದ ಕಾರ್ಯಕರ್ತರು, ಪಾಲುದಾರಿಕೆ ಸರ್ಕಾರದಲ್ಲಿ ಗೃಹ ಸಚಿವರು ರಾಜಕೀಯ ಎದುರಾಳಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಾ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾಡಳಿತಕ್ಕೆ ಮನವಿಪತ್ರ ಸಲ್ಲಿಸಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಬಿಜೆಪಿ ಜಿಲ್ಲಾಧ್ಯಕ್ಷ ನವಿಲೆ ಅಣ್ಣಪ್ಪ ಮಾತನಾಡಿ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಬಿಜೆಪಿ ಹಾಗೂ ಮಾಧ್ಯಮಗಳ ಮೇಲೆ ಸೇಡಿನ ಪ್ರತಿಕಾರ ಸಾಧಿಸುತ್ತಿದೆ.
ಪ್ರಧಾನಿ ಮೋದಿ ಅವರನ್ನು ಹತ್ಯೆ ಮಾಡುವ ಕರೆ ನೀಡಿದ್ದ ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಲಕಷ್ಣ ವಿರುದ್ಧ ಬಿಜೆಪಿ ದೂರು ನೀಡಿದ್ದರೂ ಇದುವರೆಗೂ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಜೆಡಿಎಸ್ ಶಾಸಕ ನಾರಾಯಣಗೌಡ ಚಿತ್ರನಟರಾದ ಯಶ್ ಮತ್ತು ದರ್ಶನ್ ಅವರಿಗೆ ಬೆದರಿಕೆ ಹಾಕಿದ್ದರೂ ಕ್ರಮ ತೆಗೆದುಕೊಳ್ಳದೆ ಏನೂ ಗೊತ್ತಿಲ್ಲ ಎಂಬಂತೆ ಜಾಣಮೌನ ವಹಿಸಿದೆ ಎಂದರು.