ಹಾಸನ: ಕಾಂಗ್ರೆಸ್‌ನವರಿಗೆ ಮಾಡುವುದಕ್ಕೆ ಕೆಲಸವಿಲ್ಲ. ವಿಧಾನಮಂಡಲ ಅಧಿವೇಶವನ್ನು ಹಾಳುಮಾಡಿದ್ರು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಪ್ರತಿಕ್ರಿಯಿಸಿದರು.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೇಹಳ್ಳಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿಯವರು ಕೂಡಾ ಈಶ್ವರಪ್ಪ ಆ ರೀತಿ ಹೇಳಿಕೆ ನೀಡಿಲ್ಲ ಎಂದು ಹೇಳಿದ್ದಾರೆ. ವಿಧಾನಸಭೆಯಲ್ಲಿ ಯಾವುದೇ ವಿಷಯದ ಬಗ್ಗೆ ಮಾತನಾಡಲು ಸಾಧ್ಯವಾಗದೇ ಈಶ್ವರಪ್ಪನವರ ವಿಷಯ ತೆಗೆದುಕೊಂಡು 5 ದಿನಗಳ ಕಾಲದ ವಿಧಾನಸಭೆಯ ಅಧಿವೇಶವನ್ನು ವ್ಯರ್ಥ ಮಾಡಿದರು ಎಂದು ದೂರಿದರು.
ಹಿಜಾಬ್ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಒಬ್ಬ ಮುಸಲ್ಮಾನ ಮಹಿಳೆ ಪೊಲೀಸ್ ಅಧಿಕಾರಿಯಾದ್ರೆ ಆಕೆ ಹಿಜಾಬ್ ಹಾಕಿಕೊಂಡು ಕೆಲಸ ಮಾಡಲು ಸಾಧ್ಯವಾಗುತ್ತಾ,? ವೈದ್ಯೆಯಾದ್ರೆ ಅಥವಾ ನ್ಯಾಯಾಧೀಶೆಯಾದ್ರೆ ಹಿಜಬ್ ಹಾಕಿಕೊಂಡು ಕೆಲಸ ಮಾಡಲು ಸಾಧ್ಯವಾಗುತ್ತಾ? ಅವರ ಧರ್ಮವನ್ನು ಎಲ್ಲಿ ಬೇಕಾದರೂ ಪಾಲನೆ ಮಾಡಲಿ. ಆದರೆ ಶೈಕ್ಷಣಿಕ ಕೇಂದ್ರದಲ್ಲಿ ಮಕ್ಕಳ ಮನಸ್ಸನ್ನು, ಧರ್ಮವನ್ನು ಒಡೆಯುವ ಕೆಲಸ ಮಾಡಬಾರದು.
ಶೈಕ್ಷಣಿಕ ಸಂಸ್ಥೆಗಳಲ್ಲಿ ಮಕ್ಕಳಲ್ಲಿ ಸಮಾನತೆ ಸಾಧಿಸಬೇಕೆಂಬ ಉದ್ದೇಶದಿಂದ ಸಮವಸ್ತ್ರವನ್ನು ಸರ್ಕಾರ ಜಾರಿಗೆ ತಂದಿದ್ದು ಜಾತಿ, ಧರ್ಮದ ವಿಚಾರವಾಗಿ ಸಮಾಜವನ್ನು ಒಡೆಯುವ ಕೆಲಸವಾಗಬಾರದು. ಪ್ರಜಾಪ್ರಭುತ್ವದಲ್ಲಿ ಸರ್ಕಾರ ಮತ್ತು ನ್ಯಾಯಾಲಯಕ್ಕಿಂತ ದೊಡ್ಡವರು ಯಾರೂ ಇಲ್ಲ. ಹಾಗಾಗಿ ಎಲ್ಲರೂ ಸರ್ಕಾರದ ಆದೇಶವನ್ನು ಪಾಲನೆ ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಶ್ರವಣಬೆಳಗೊಳ ಮತ್ತು ನುಗ್ಗೇಹಳ್ಳಿಯಲ್ಲಿ ಎರಡು ರೈತ ಸಂಪರ್ಕ ಕೇಂದ್ರವನ್ನು ಉದ್ಘಾಟಿಸಿದ್ದು, ಕೆಲವರು ಕೃಷಿ ಮತ್ತು ಅರಣ್ಯ ಭೂಮಿಯಲ್ಲಿ ಯಾವುದೇ ದಾಖಲಾತಿಯಿಲ್ಲದೇ ದಶಕಗಳಿಂದ ಉಳುಮೆ ಮಾಡಿಕೊಂಡು ಬರುತ್ತಿದ್ದು, ಅದಕ್ಕಾಗಿ ಸರ್ಕಾರ ಮತ್ತು ರೈತರ ನಡುವೆ ಜಗಳ ಪ್ರಾರಂಭವಾಗಿದೆ. ಕೃಷಿ ಭೂಮಿಯನ್ನು ಅನುಕಂಪದ ಆಧಾರದ ಮೇಲೆ ಸರ್ಕಾರ ರೈತರಿಗೆ ನೀಡುವ ಕಾರ್ಯ ಮಾಡಬಹುದು. ಆದ್ರೆ, ಅರಣ್ಯ ಭೂಮಿಯನ್ನು ಯಾವುದೇ ಕಾರಣಕ್ಕೂ ರೈತರಿಗೆ ನೀಡಲು ಬರುವುದಿಲ್ಲ. ಈ ಬಗ್ಗೆ ಸುಪ್ರೀಂಕೋರ್ಟ್ ಆದೇಶವಿದೆ. ಆದರೆ ಪಾಣಿಯಿದ್ದರೆ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಸುಮಾರು 2.5ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಯಾಗಿದ್ದು, ಭತ್ತ ಖರೀದಿಯ ನೋಂದಣಿ ಕಾರ್ಯವಾಗುತ್ತಿದೆ. ರಾಗಿಯ ಹೊಸ ನೋಂದಣಿ ಪ್ರಾರಂಭವಾಗಿಲ್ಲ. ಹೆಚ್ಚುವರಿ ರಾಗಿ ಖರೀದಿಗಾಗಿ ಕೇಂದ್ರಕ್ಕೆ ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಸಲ್ಲಿಸಿದ್ದೇವೆ. ಕೇಂದ್ರದ ಆದೇಶ ಬಂದ ಬಳಿಕ ಖರೀದಿ ಮಾಡಲಾಗುವುದು ಎಂದು ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.
ಇದನ್ನೂ ಓದಿ: ರಷ್ಯಾ ದಾಳಿಗೆ ನಾಗರಿಕರು, ಸೈನಿಕರು ಸೇರಿ 137 ಮಂದಿ ಸಾವು: ಉಕ್ರೇನ್ ಅಧ್ಯಕ್ಷ