ಹಾಸನ: 13 ಪ್ರಕರಣಗಳಲ್ಲಿ ಭಾಗಿಯಾಗಿರುವ ಅಂತಾರಾಜ್ಯ ವಾಹನ ಕಳ್ಳರನ್ನು ಹೆಡೆಮುರಿ ಕಟ್ಟುವಲ್ಲಿ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಾಸನ ತಾಲೂಕಿನ ಶಾಂತಿಗ್ರಾಮ ಹೋಬಳಿಯ ಹೆಚ್ ಆಲದಹಳ್ಳಿ ಗ್ರಾಮದ ರೂಪೇಶ್ ಆಲಿಯಾಸ್ ರೂಪರಾಜ್ (34) ,ಚನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಕುಂದೂರು ಗ್ರಾಮದ ಗೌರೀಶ್ (34) ಬಂಧಿತ ಆರೋಪಿಗಳು. ಈ ಇಬ್ಬರು 13 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ವೃತ್ತಿಯಲ್ಲಿ ಚಾಲಕರಾಗಿದ್ದಾರೆ.
ಹೊಳೆನರಸೀಪುರ ಪಟ್ಟಣದ ಹೊರವಲಯದಲ್ಲಿ ವಾಹನ ತಪಾಸಣೆ ಮಾಡುವ ಸಂದರ್ಭದಲ್ಲಿ, ಟ್ರ್ಯಾಕ್ಟರ್ನಲ್ಲಿ ಬಂದ ರೂಪೇಶ್ನನ್ನು ದಾಖಲಾತಿ ಪರಿಶೀಲನೆಗಾಗಿ ಪೊಲೀಸರು ತಡೆದಿದ್ದಾರೆ. ಆಗ ಆತ ಯಾವುದೇ ದಾಖಲಾತಿ ನೀಡಿಲ್ಲ. ಈ ವೇಳೆ ಇಬ್ಬರನ್ನು ವಶಕ್ಕೆ ಪಡೆದು, ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ಇಬ್ಬರು ವಾಹನಗಳನ್ನು ಕಳವು ಮಾಡುತ್ತಿದ್ದರು ಎಂಬ ವಿಷಯ ಬೆಳಕಿಗೆ ಬಂದಿದ್ದು, ಈ ವಿಷಯವನ್ನು ಆರೋಪಿಗಳು ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ.
ಓದಿ:ಹಾಸನ: ಜೀವನದಲ್ಲಿ ಜಿಗುಪ್ಸೆ.. ಹಾಸ್ಟೆಲ್ನಲ್ಲಿ ನೇಣಿಗೆ ಶರಣಾದ ವಿದ್ಯಾರ್ಥಿನಿ
ಕಳೆದ ಒಂದೂವರೆ ವರ್ಷಗಳ ಹಿಂದೆ ಹಾಸನದ ಬೈಪಾಸ್ನಲ್ಲಿರುವ ಮನೆಯ ಮುಂದೆ ನಿಂತಿದ್ದ ಮಹೇಂದ್ರ ಕಂಪನಿಯ ಟ್ರ್ಯಾಕ್ಟರ್ ಹಾಗೂ 2 ವರ್ಷಗಳ ಹಿಂದೆ ಉಡುಪಿ ಜಿಲ್ಲೆ ಅಬೈಂದೂರು ಬಳಿಯ ಶಿರೂರು ಗ್ರಾಮದಲ್ಲಿ ಒಂದು ಲಾರಿಯನ್ನು ಕಳವು ಮಾಡಿದ್ದರು. ಇದರ ಜೊತೆಗೆ ಐದು ತಿಂಗಳ ಹಿಂದೆ ಹಾಸನದ ಬೈಪಾಸ್ ರಸ್ತೆಯ ಸಮೀಪದಲ್ಲಿ ನಿಲ್ಲಿಸಿದ್ದ ಮತ್ತೊಂದು ಟ್ರ್ಯಾಕ್ಟರ್ ಹಾಗೂ ಟ್ರೈಲರ್ನನ್ನು ಕಳ್ಳತನ ಮಾಡಿದ್ದರು. ಇವನ್ನು ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ತಮ್ಯಾನಾಯಕ ಎಂಬುವರಿಗೆ ಮಾರಾಟ ಮಾಡಿದ್ದರು. ಈಗ ಎಲ್ಲ ವಾಹನಗಳನ್ನು ಆರೋಪಿಗಳಿಂದ ವಶಕ್ಕೆ ಪಡೆಯಲಾಗಿದೆ.
ಸುಮಾರು ಹದಿಮೂರು ಪ್ರಕರಣಗಳಲ್ಲಿ ಭಾಗಿಯಾಗಿರುವ ಇವರಿಂದ ಲಾರಿ ಹಾಗೂ ಟ್ರ್ಯಾಕ್ಟರ್ ಸೇರಿದಂತೆ ಸುಮಾರು 14 ಲಕ್ಷ ರೂ. ಮೌಲ್ಯದ ವಾಹನಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.