ಹಾಸನ: ಬೇಲೂರು ತಾಲೂಕಿನ ಅರೇಹಳ್ಳಿ ಕೃಷಿ ಪತ್ತಿನ ಸಹಕಾರ ಬ್ಯಾಂಕಿನಲ್ಲಿ ಅವ್ಯವಹಾರ ನಡೆದಿದ್ದು, ಕೂಡಲೆ ಹಣ ದುರುಪಯೋಗವಾಗಿರುವ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡುವಂತೆ ಕುವೆಂಪು ನಗರದಲ್ಲಿರುವ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಗೆ ನೊಂದ ರೈತರು ಮನವಿ ಮಾಡಿದ್ದಾರೆ.
ರೈತರ ಹತ್ತಿರ ಸಾಲ ಮನ್ನಾ ಮಾಡುವ ನೆಪದಲ್ಲಿ, ಮೂರ್ನಾಲ್ಕು ಸಲ ಬ್ಯಾಂಕಿನ ಖಾಲಿ ಚೆಕ್-ಸ್ಲಿಪ್ಗಳು ಮತ್ತು ವೋಚರ್ಗಳಿಗೆ ಸಹಿ ಮಾಡಿಸಿಕೊಂಡು ಆರ್.ಟಿ.ಜಿ.ಎಸ್ ಮೂಲಕ ನೇರವಾಗಿ ಖಾತೆಗೆ ಸರ್ಕಾರದ ಹಣ ಹಾಕಿಸಿಕೊಂಡು ಡ್ರಾ ಮಾಡಿಕೊಂಡಿರುವುದಾಗಿ ದೂರಿದ್ದಾರೆ. ಜಂಟಿ ಖಾತೆಯಲ್ಲಿ ಗಂಡ-ಹೆಂಡತಿ, ತಂದೆ-ಮಗ, ಇತರೆ ಇರುವ ಸಾಲದ ಖಾತೆಗಳನ್ನು ರೈತರಿಗೆ ತಿಳಿಯದಂತೆ ಪ್ರತ್ಯೇಕಗೊಳಿಸಿ ಕಡಿಮೆ ಸಾಲವನ್ನು ಹೆಚ್ಚಿಗೆ ಸೆಲ್ಫ್ ಚೆಕ್ ಮೂಲಕ ಹಣ ಡ್ರಾ ಮಾಡಿಸಿಕೊಂಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಲಾಗಿದೆ.
ಕೆಲವರ ಸಹಕಾರದಲ್ಲಿ ನಕಲಿ ಮತ್ತು ಅಸಲಿ ಕಿಸಾನ್ ಕಾರ್ಡ್ ಬಳಸಿ ಎಟಿಎಂ ಕೌಂಟರ್ಗಳಲ್ಲಿ ಹಣ ಡ್ರಾ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತರ ಅರೇಹಳ್ಳಿ ಪಿಎಸಿಸಿ ಬ್ಯಾಂಕಿನ ಖಾತೆಗಳಲ್ಲಿ ಒಂದು ಲೆಕ್ಕ ಹಾಗೂ ಬೇಲೂರಿನ ಹೆಚ್.ಡಿ.ಸಿ.ಸಿ. ಬ್ಯಾಂಕಿನ ಆನ್ಲೈನ್ ಖಾತೆಗಳಲ್ಲಿ ಮತ್ತೊಂದು ಲೆಕ್ಕ ತೋರಿಸಲಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.