ಹಾಸನ: ಆಕಸ್ಮಿಕ ಬೆಂಕಿ ತಗುಲಿ ವಾಸದ ಮನೆಯೊಂದು ಸುಟ್ಟು ಕರಕಲಾಗಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಬಾಗೂರು ಸಮೀಪದ ವಳಗೆರಹಳ್ಳಿಯ ಮಂಜುಳಾ ರಾಮೇಗೌಡ ಎಂಬುವರ ವಾಸದ ಮನೆ ಸುಟ್ಟು ಕರಕಲಾಗಿದ್ದು, ಹಾಲಿನ ಡೈರಿಗೆ ಹಾಲು ಹಾಕಿ ಬರುವಷ್ಟರಲ್ಲಿ ದುರ್ಘಟನೆ ಸಂಭವಿಸಿದೆ. ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳೂ ಸೇರಿದಂತೆ ಮನೆಯ ಪಕ್ಕದಲ್ಲಿದ್ದ ಮನೆ ನಿರ್ಮಾಣದ ಅಗತ್ಯ ಸಲಕರಣೆಗಳಾದ ಸಿಮೆಂಟ್, ಕಬ್ಬಿಣದ ಸಲಾಕೆ, ಬಾಗಿಲುಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದೆ.
ಇಷ್ಟೇ ಅಲ್ಲದೆ ಮನೆ ಕಟ್ಟುವ ಕೆಲಸ ಮುಕ್ತಾಯದ ಹಂತಕ್ಕೆ ಬಂದಿದ್ದರಿಂದ ಮನೆಯ ಮೇಲ್ಚಾವಣಿ ಹಾಕುವ ಸಿದ್ಧತೆ ನಡೆಯುತ್ತಿತ್ತು. ಇದಕ್ಕೆ ಬೇಕಾಗುವಂತಹ ಹಣದ ವ್ಯವಸ್ಥೆಯನ್ನು ಕೂಡ ಮಾಡಿಕೊಂಡಿದ್ದು ಸುಮಾರು ಒಂದೂವರೆ ಲಕ್ಷ ಹಣದ ನೋಟುಗಳು ಕೂಡ ಬೆಂಕಿಯಿಂದ ಸುಟ್ಟು ಹೋಗಿವೆ. ಈ ವಿಚಾರ ತಿಳಿದ ಅಗ್ನಿಶಾಮಕ ದಳ ತಕ್ಷಣ ಆಗಮಿಸಿ ಬೆಂಕಿ ನಂದಿಸುವ ಕೆಲಸ ಮಾಡಿದ್ದರು. ಆದರೆ ಅಷ್ಟರೊಳಗೆ ಸಂಪೂರ್ಣವಾಗಿ ಎಲ್ಲಾ ವಸ್ತುಗಳು ಬೆಂಕಿಗಾಹುತಿಯಾಗಿದೆ.
ಈ ಸಂಬಂಧ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.