ಸಕಲೇಶಪುರ: ತಾಲೂಕಿನಲ್ಲಿ ನಡೆಯುತ್ತಿರುವ ಪ್ರಾಣಿ ಹಾಗೂ ಮಾನವನ ನಡುವಿನ ಸಂಘರ್ಷಕ್ಕೆ ಶಾಶ್ವತ ಪರಿಹಾರ ಹುಡುಕಿಕೊಡಲು ಸರ್ಕಾರ ಮುಂದಾಗಬೇಕು ಎಂದು ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಬಿ.ಸಿದ್ದಯ್ಯ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನಲ್ಲಿ ಆನೆ ಹಾಗೂ ಮಾನವನ ಸಂಘರ್ಷ ದಿನನಿತ್ಯ ನಡೆಯುತ್ತಿರುವ ಒಂದು ಜ್ವಲಂತ ಸಮಸ್ಯೆಯಾಗಿದೆ. ಆನೆ ಕಾರಿಡಾರ್ ಒಂದೇ ಈ ಸಮಸ್ಯೆಗೆ ಶಾಶ್ವತ ಪರಿಹಾರ ಅಲ್ಲ. ಸಮಸ್ಯೆ ಬಗೆಹರಿಸಲು ಇತರ ಮಾರ್ಗಗಳನ್ನು ಸಹ ಹುಡುಕಬೇಕಾಗಿದೆ. ಕಾಡಾನೆ ಸಮಸ್ಯೆ ಕುರಿತು ಪ್ರತಿಭಟನೆಗಳನ್ನು ಮಾಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಸಂಬಂಧಪಟ್ಟ ಅರಣ್ಯ ಸಚಿವರ ಜೊತೆ ಹಾಗೂ ಅಧಿಕಾರಿಗಳ ಜೊತೆ ನಾನು ಮಾತನಾಡಿದ್ದೇನೆ. ಸಂಬಂಧಪಟ್ಟ ತಜ್ಞರೊಡನೆ ಮಾತನಾಡಿ ಸಮಸ್ಯೆಯನ್ನು ಬಗೆಹರಿಕೊಳ್ಳಬೇಕು ಎಂದರು.
ಕಳೆದ ಆರೇಳು ತಿಂಗಳಿಂದ ನನ್ನ ವೈಯಕ್ತಿಕ ಕಾರಣಗಳಿಂದ ಕ್ಷೇತ್ರದಿಂದ ದೂರ ಉಳಿದಿದ್ದರೂ ದೂರವಾಣಿ ಮೂಲಕ ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿದವರಿಗೆ ಸ್ಪಂದಿಸಿದ್ದೇನೆ. ಕಳೆದ ಎರಡು ತಿಂಗಳುಗಳಿಂದ ಕ್ಷೇತ್ರದಲ್ಲಿ ನಿರಂತರ ಒಡನಾಟ ಇಟ್ಟುಕೊಂಡಿದ್ದೇನೆ. ಇಲ್ಲಿಯೇ ಮನೆ ಮಾಡಿ, ತಿಂಗಳಲ್ಲಿ ಹತ್ತರಿಂದ ಹದಿನೈದು ದಿನವಿದ್ದು ಪ್ರತಿಯೊಂದು ಗ್ರಾಮ ಪಂಚಾಯ್ತಿಗೆ ಭೇಟಿ ಕೊಟ್ಟು ಅಲ್ಲಿನ ಸಮಸ್ಯೆ ಆಲಿಸುತ್ತೇನೆ. ಕಳೆದ 12 ವರ್ಷಗಳಿಂದ ಇಲ್ಲಿ ಶಾಸಕರಾದವರಿಗೆ ಕನಿಷ್ಠ ಕಸ ವಿಲೇವಾರಿ ಸಮಸ್ಯೆ ಬಗೆಹರಿಸಲಾಗಿಲ್ಲ ಹಾಗೂ ಪಟ್ಟಣ ವ್ಯಾಪ್ತಿಗೆ ಯುಜಿಡಿ ತರುವ ಕೆಲಸವನ್ನು ಸಹ ಅವರು ಮಾಡಿಲ್ಲ. ಕಸದ ಸಮಸ್ಯೆಯನ್ನು ಬಗೆಹರಿಸಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಹಾಗೂ ಯುಜಿಡಿ ಕುರಿತು ನೀರಾವರಿ ನಿಗಮದ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ.
ನಮ್ಮ ಪಕ್ಷದ ಅಧ್ಯಕ್ಷರ ಆದೇಶದ ಮೇರೆಗೆ ಅವರು ಹೇಳಿದಂತೆ ಕೆಲಸ ಮಾಡಲು ಸಿದ್ಧನಿದ್ದೇನೆ. ಮುಂಬರುವ ಪಂಚಾಯ್ತಿ ಚುನಾವಣೆಗೆ ಕಷ್ಟಪಟ್ಟು ಕೆಲಸ ಮಾಡುತ್ತೇನೆ. ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಬೇಕಿದೆ. ಪಕ್ಷದ ಕಾರ್ಕರ್ತರನ್ನು ಹುರಿದುಂಬಿಸಿ ಅವರಿಗೆ ಪಕ್ಷದ ಮುಂದೆ ಅಧಿಕಾರಕ್ಕೆ ಬರುತ್ತದೆ ಎಂದು ಮನವರಿಕೆ ಮಾಡಿಕೊಡಬೇಕು. ಹಿಂದೆ ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ತಂದಂತಹ ಅನ್ನಭಾಗ್ಯ ಯೋಜನೆಯಿಂದ ಕೊರೊನಾದಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಬಹಳ ಜನ ಉಪವಾಸ ಇರುವುವುದು ತಪ್ಪಿತು. ನಮ್ಮ ಪಕ್ಷದ ವತಿಯಿಂದ ಸುಮಾರು ಮೂರು ಲಕ್ಷ ರೈತರಿಂದ ತರಕಾರಿಗಳನ್ನು ಖರೀದಿಸಿ ಜನರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಯಿತು ಎಂದರು.