ಹಾಸನ: ಎಲ್ಲಾ ಅಭಿವೃದ್ಧಿ ಕೆಲಸವನ್ನು ಸರ್ಕಾರದಿಂದಲೇ ಮಾಡಲು ಸಾಧ್ಯವಿಲ್ಲ. ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯಂತವರ ಸಹಕಾರವೂ ಅವಶ್ಯಕವಾಗಿ ಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನಲ್ಲಿ ರಾಷ್ಟ್ರೀಯ ಆಯುರ್ವೇದ ದಿನದ ಅಂಗವಾಗಿ ಆಯೋಜಿಸಲಾಗಿದ್ದ 500 ಹಾಸಿಗೆಯುಳ್ಳ ಆಸ್ಪತ್ರೆಗೆ ನವೀಕೃತ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೆಗ್ಗಡೆ ಅವರು ಶೈಕ್ಷಣಿಕ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಸಾಮಾಜಿಕವಾಗಿ ಹಲವು ಕ್ಷೇತ್ರಗಳಲ್ಲಿ ಸಲ್ಲಿಸಿರುವ ಸೇವೆ ಶ್ಲಾಘನೀಯ. ಕೆರೆ ಅಭಿವೃದ್ಧಿ ಸೇರಿದಂತೆ ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಅವರ ಕಾರ್ಯ ಪ್ರಶಂಸಾರ್ಹವಾಗಿದೆ. ಆಯುರ್ವೇದ ಚಿಕಿತ್ಸಾ ವಿಧಾನವನ್ನು ಉನ್ನತ ಸ್ಥಿತಿಗೆ ಕೊಂಡೊಯ್ಯಲು ಅವರ ಪಾತ್ರ ತುಂಬಾ ಮುಖ್ಯವಾಗಿದೆ. ಹಲವು ದಶಕದ ಇತಿಹಾಸ ಹೊಂದಿರುವ ಆಯುರ್ವೇದವನ್ನು ಇಂದು ಹೆಚ್ಚು ಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ಹಾಗೂ ಆಯುರ್ವೇದ ಆಸ್ಪತ್ರೆಗಳನ್ನು ಸ್ಥಾಪಿಸುವಲ್ಲಿ ಹೆಗ್ಗಡೆ ಅವರ ಪಾತ್ರ ಹೆಚ್ಚಿದೆ ಎಂದರು.
ಶಾಸಕ ಪ್ರೀತಂ ಗೌಡ ಮಾತನಾಡಿ, ಪರಿಸರದ ವಿರುದ್ಧ ನಾವು ಎಂದು ಹೋಗಬಾರದು. ಆಯುರ್ವೇದದ ಬಗ್ಗೆ ಜನರಿಗೆ ಹೆಚ್ಚು ಮಾಹಿತಿ ನೀಡಿ, ಅರ್ಥ ಮಾಡಿಸಬೇಕು. ಆಯುರ್ವೇದದ ಒಳ್ಳೆಯ ಆವಿಷ್ಕಾರವನ್ನು ಬೆಳೆಸುವ ಕಾರ್ಯ ಆಗಬೇಕು ಎಂದು ಹೇಳಿದರು.