ಸಕಲೇಶಪುರ : ಮನೆಯ ಬಳಿ ಇದ್ದ ಗಂಧದ ಮರ ಕಡಿದು ಅಕ್ರಮವಾಗಿ ಸಾಗಿಸುತ್ತಿದ್ದ ಖದೀಮನನ್ನು ಸಕಲೇಶಪುರ ವಲಯ ಅರಣ್ಯಾಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೇಲೂರು ತಾಲೂಕಿನ ಬಿಕ್ಕೋಡಿನ ಹಮೀದ್ ಎಂಬಾತ ಬಂಧಿತ ಆರೋಪಿ. ಹಳೆಕೆರೆ ಗ್ರಾಮದ ಕೊರಗಪ್ಪ ಎಂಬುವರ ಮನೆಯ ಬಳಿ ಇದ್ದ ಸುಮಾರು 35 ಕೆಜಿ ತೂಕದ ಗಂಧದ ಮರವನ್ನು ಕಡಿದು ಮಾರುತಿ 800 ಕಾರಿನಲ್ಲಿ ಸಾಗಿಸುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.
ಸೆರೆಸಿಕ್ಕ ಆರೋಪಿಯ ಜೊತೆಗಿದ್ದ ಮತ್ತೊಬ್ಬ ವ್ಯಕ್ತಿ ಪರಾರಿಯಾಗಿದ್ದು ಆತನ ಬಂಧನಕ್ಕಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಬಲೆ ಬೀಸಿದ್ದಾರೆ. ವಲಯ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು ಹಾಗೂ ವಲಯ ಅರಣ್ಯ ಅಧಿಕಾರಿ ರಾಘವೇಂದ್ರ ಅಗಸೆ ಅವರ ಮಾರ್ಗದರ್ಶನದಲ್ಲಿ ಮಂಜ್ರಾಬಾದ್ ಉಪ ವಲಯ ಅರಣ್ಯ ಅಧಿಕಾರಿ ದಿನೇಶ್, ಅರಣ್ಯ ರಕ್ಷಕರಾದ ವೇಣು, ಮಹಾದೇವ್ ಮತ್ತು ಲೋಕೇಶ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.