ಹಾಸನ : ದೀಪಾವಳಿಯ ಹಬ್ಬ ಬಂದರೆ ಸಾಕು ಈ ಗ್ರಾಮದವರು ಎಲ್ಲಿದ್ದರೂ ಊರಿಗೆ ಬರುತ್ತಾರೆ. ಗ್ರಾಮದಲ್ಲಿ ಬಲಿಪಾಡ್ಯಮಿಯ ದಿನದಿಂದ ಪ್ರಾರಂಭವಾಗುವ ಈ ಹಬ್ಬ ಮೂರು ದಿನಗಳ ಕಾಲ ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಈ ಹಬ್ಬದ ಆಚರಣೆಯಲ್ಲಿ ಜನರು ತಮ್ಮ ಇಷ್ಟಾರ್ಥಗಳನ್ನು ಪೂರೈಸಲು ವಿಶಿಷ್ಟ ಹರಕೆಯನ್ನು ಹೊರುತ್ತಾರೆ. ಈ ಹರಕೆ ಹೊತ್ತವರನ್ನು ಊರು ತುಂಬಾ ಮೆರವಣಿಗೆ ಮಾಡಲಾಗುತ್ತದೆ. ಈ ಆಚರಣೆ ಮೂರು ದಶಕಗಳಿಂದ ನಡೆದುಕೊಂಡು ಬಂದಿದ್ದು, ಇಂದಿಗೂ ಈ ಸಂಪ್ರದಾಯ ಮುಂದುವರೆದಿದೆ.
ಸಂಜೀವಿನಿ ಆಂಜನೇಯಸ್ವಾಮಿಯ ದೇವಾಲಯ : ಜಿಲ್ಲೆಯ ಗಡಿ ಭಾಗದಲ್ಲಿರುವ ಕುಂಭೇನಹಳ್ಳಿ ಗ್ರಾಮದಲ್ಲಿ ಸಂಜೀವಿನಿ ಆಂಜನೇಯಸ್ವಾಮಿಯ ದೇವಾಲಯವಿದೆ. ಜೈನ ಕಾಶಿ ಶ್ರವಣಬೆಳಗೊಳದಿಂದ ಕೇವಲ 5 ಕಿಲೋ ಮೀಟರ್ ದೂರಲ್ಲಿರುವ ಈ ದೇವಾಲಯಕ್ಕೆ ಸುಮಾರು ಸಾವಿರ ವರ್ಷಗಳ ಇತಿಹಾಸವಿದೆ. ಕುಟುಂಬದ ನಾನಾ ಸಂಕಷ್ಟಗಳಿಂದ ಪಾರಾಗಲು ಸುತ್ತ ಮುತ್ತಲ ಹಳ್ಳಿಗರಷ್ಟೆಯ್ಲಲದೇ ಹೊರ ಜಿಲ್ಲೆಯಿಂದಲೂ ಇಲ್ಲಿಗೆ ಬಂದು ತಮ್ಮ ಹರಕೆಯನ್ನು ಅರ್ಪಿಸುತ್ತಾರೆ. ಮಕ್ಕಳಾಗದಿದ್ದವರು, ಹರಕೆ ಹೊತ್ತವರು ಇಲ್ಲಿಗೆ ಬಂದು ಹರಕೆ ತೀರಿಸುತ್ತಾರೆ.
ವಿಶೇಷ ಹರಕೆ ಹೊತ್ತುಕೊಳ್ಳುವ ಭಕ್ತರು : ಹರಕೆ ಹೊತ್ತ ಭಕ್ತರು ಸಂಜೀವಿನಿ ಆಂಜನೇಯನ ದರ್ಶನ ಮಾಡಿದ ಹರಕೆಯನ್ನು ತೀರಿಸಲು ಮುಂದಾಗುತ್ತಾರೆ. ಈ ಹರಕೆ ಹೇಗಿರುತ್ತದೆ ಎಂದರೆ, ಹರಕೆಯೊತ್ತವರನ್ನು, ಹರಕೆ ತೀರಿಸುವವರನ್ನು ಏಣಿಯ ಮೇಲೆ ಕುಳ್ಳಿರಿಸಲಾಗುತ್ತದೆ. ಬಳಿಕ ಅವರಿಗೆ ಗೋಣಿ ಚೀಲದ ಬಟ್ಟೆಯನ್ನು ತೊಡಿಸಿ, ಹಸಿರೆಲೆಗಳಿಂದ ಹಾಗೂ ಬಣ್ಣಗಳಿಂದ ಶೃಂಗಾರ ಮಾಡಲಾಗುತ್ತದೆ. ಬಳಿಕ ಏಣಿ ಮೇಲೆ ಕುಳಿತ ಭಕ್ತರನ್ನು ಹೊತ್ತು ಊರ ತುಂಬ ಮೆರವಣಿಗೆ ಮಾಡಲಾಗುತ್ತದೆ. ಮೆರವಣಿಗೆ ವೇಳೆ ಊರ ಮಂದಿ ಆತನಿಗೆ ತಮ್ಮ ಮನೆಯ ಮುಂದೆ ಬಂದಾಗ ಸಗಣಿ, ಬೂದಿ, ಗಂಜಲ ಇತ್ಯಾದಿಗಳನ್ನು ಮೇಲೆ ಎರಚುತ್ತಾರೆ. ನಂತರ ಎರಡನೇ ಬಾರಿ ಮೆರವಣಿಗೆ ಬಂದಾಗ ಆತನ ಪಾಪ ಕರ್ಮಗಳು ತೊಳೆಯಲೆಂದು ಪವಿತ್ರ ಗಂಗೆಯನ್ನು ಎರಚುತ್ತಾರೆ. ಹೀಗೆ ಊರ ಮಂದಿಯಿಂದ ಹೊಡೆಸಿಕೊಂಡರೇ ಕುಟುಂಬದ ಸಂಕಷ್ಟಗಳೆಲ್ಲಾ ಪರಿಹಾರವಾಗುತ್ತದೆ ಎಂಬ ನಂಬಿಕೆ ಇವರದ್ದಾಗಿದೆ.
ಸಂತಾನ ಭಾಗ್ಯ ಒದಗಿಸುವ ದೇವರು : ಸಂತಾನ ಭಾಗ್ಯ ಇಲ್ಲದವರು ಇಲ್ಲಿಗೆ ಬಂದು ಹರಕೆ ಹೊತ್ತರೆ ಮಕ್ಕಳಾಗುತ್ತದೆ ಎಂಬ ನಂಬಿಕೆ ಇದೆ. ಈ ಹಬ್ಬದ ಮೂರು ದಿನಗಳಲ್ಲಿ ಇಲ್ಲಿನ ಗ್ರಾಮಸ್ಥರು ಮಾಂಸಹಾರ ಸೇವನೆ ಮಾಡದೇ ಶ್ರದ್ಧಾ ಭಕ್ತಿಯನ್ನು ಪಾಲಿಸುತ್ತಾರೆ. ಇನ್ನು, ಓಕಳಿಯ ಹಿಂದಿನ ದಿನ ಶ್ರೀರಾಮಚಂದ್ರನು ವನವಾಸ ಮಾಡಿದ ಸ್ಥಳವಾದ ಪಚ್ಚೆಕಲ್ಲು ರಂಗಸ್ವಾಮಿಯ ಬೆಟ್ಟಕ್ಕೆ ಉತ್ಸವ ಮೂರ್ತಿಯಾದ ಆಂಜನೇಯನನ್ನು ಕೊಂಡೊಯ್ದು ಪೂಜೆ ಸಲ್ಲಿಸಲಾಗುತ್ತದೆ. ಬರಗಾಲ, ಅತಿವೃಷ್ಠಿ ಸಂಭವಿಸಿದಾಗ ಊರಿನವರೆಲ್ಲಾ ಸೇರಿ ಪೊರ ಎಂಬ ಹಬ್ಬವನ್ನು ಮಾಡಿ ಸುತ್ತಮುತ್ತಲ ಗ್ರಾಮಗಳಿಗೆ ಅನ್ನಸಂತರ್ಪಣೆ ಮಾಡುತ್ತಾರೆ.
ಹರಕೆ ಹೊತ್ತ ಭಕ್ತರಿಗೆ ಏಣಿಯಲ್ಲಿ ಮೆರವಣಿಗೆ : ಹಾಸನಾಂಬೆಯ ಬಾಗಿಲು ಮುಚ್ಚುವ ಹಿಂದಿನ ದಿನದಿಂದ ಆರಂಭವಾಗುವ ಈ ದೀಪಾವಳಿ ಹಬ್ಬವನ್ನು ಬಹಳ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗುತ್ತದೆ. ಮೊದಲನೆ ದಿನ ಬಲೀಂದ್ರ ಪೂಜೆ, ಎರಡನೇ ದಿನ ದನಗಳ ಜಾತ್ರೆ, ಮೂರನೇ ದಿನ ಓಕುಳಿ ಸಡಗರದೊಂದಿಗೆ ಭಕ್ತರು ಹರಕೆಯನ್ನು ತೀರಿಸುತ್ತಾರೆ. ಓಕುಳಿಯಾಟಕ್ಕೂ ಮುನ್ನ ಗ್ರಾಮದ ಕೆಲ ಯುವಕರ ತಂಡ ದರ್ಶನಕ್ಕೆ ಬಂದಿರುವ ಭಕ್ತರ ಮನಸ್ಸನ್ನು ಸಂತೋಷಪಡಿಸಲು ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಬಳಿಕ ಹರಕೆ ಹೊತ್ತ ಭಕ್ತನನ್ನು ಮೆರವಣಿಗೆ ಮಾಡಲಾಗುತ್ತದೆ.
ವಿವಿಧ ರೋಗಗಳು ದೂರವಾಗುತ್ತದೆ ಎಂಬ ನಂಬಿಕೆ : ಮೆರವಣಿಗೆ ನಡೆದ ಬಳಿಕ ಸಂಜೀವಿನಿ ಆಂಜನೇಯನ ಉತ್ಸವ ಜರುಗುತ್ತದೆ. ಉತ್ಸವಕ್ಕೂ ಮುನ್ನ ಗ್ರಾಮದಲ್ಲಿನ ಕಸ ಕಡ್ಡಿ, ಅನುಪಯುಕ್ತ ತ್ಯಾಜ್ಯವನ್ನು ತಂದು ಊರ ದೇವಾಲಯದ ಮುಂದೆ ರಾಶಿ ಹಾಕಿ ದಹನ ಮಾಡಲಾಗುತ್ತದೆ. ಇದರಿಂದ ಗ್ರಾಮಕ್ಕೆ ಒದಗಿಬರುವ ಸಾಂಕ್ರಾಮಿಕ ರೋಗಗಳು, ರೋಗ ರುಜಿನಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ.
ಯಾವುದೇ ಲಿಂಗಬೇಧವಿಲ್ಲದೆ ಎಲ್ಲರೂ ಸಮಾನರಾಗಿ ಇಲ್ಲಿ ಓಕಳಿ ನಡೆಯುತ್ತದೆ. ಓಕುಳಿಯಾಡುವುದರಿಂದ ಚರ್ಮದ ಕಾಯಿಲೆಗಳೂ ದೂರವಾಗುತ್ತವೆ ಎಂಬ ನಂಬಿಕೆಯೂ ಇಲ್ಲಿನ ಜನರದ್ದಾಗಿದೆ. ಕೇವಲ ಸುತ್ತ ಮುತ್ತಲ ಹಳ್ಳಿಗಳಿಂದಷ್ಟೆಯಲ್ಲದೇ ರಾಜ್ಯದ ನಾನಾ ಭಾಗಗಳಿಂದ ಇಲ್ಲಿಗೆ ಬಂದು ಹರಕೆ ತೀರಿಸುತ್ತಾರೆ. ಹಲವು ದಶಕಗಳಿಂದ ಈ ಆಚರಣೆ ನಡೆದುಕೊಂಡು ಬಂದಿದ್ದು, ಇಂದಿಗೂ ಈ ಆಚರಣೆಗಳನ್ನು ಗ್ರಾಮಸ್ಥರು ಭಕ್ತಿಯಿಂದ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
ಇದನ್ನೂ ಓದಿ : ಕಾಂತಾರ ಚಿತ್ರದ ವರಾಹರೂಪ ಹಾಡು ಪ್ರಸಾರಕ್ಕೆ ನ್ಯಾಯಾಲಯ ತಡೆಯಾಜ್ಞೆ