ಹಾಸನ: ಮದುವೆ ವಿಚಾರದಲ್ಲಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನಲ್ಲಿ ನಡೆದಿದೆ.
ಸಿಂಧು (18) ಮೃತ ಯುವತಿಯಾಗಿದ್ದು, ತನ್ನ ಪ್ರಿಯಕರನಿಂದಲೇ ಕೊಲೆಯಾಗಿದ್ದಾಳೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಸಿಂಧು ಮತ್ತು ಚಂದನ್ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಕಳೆದ ನಾಲ್ಕು ದಿನಗಳ ಹಿಂದೆ ಈಕೆಯ ಸ್ನೇಹಿತೆ ಗೀತಾ ಎಂಬ ಯುವತಿ ಶರತ್ ಎಂಬವವರನ್ನು ಪ್ರೀತಿಸಿ ಅರಕಲಗೂಡು ಪಟ್ಟಣದ ದೊಡ್ಡಮ್ಮ ದೇವಿ ದೇವಾಲಯದಲ್ಲಿ ಮದುವೆಯಾಗಿದ್ದು, ಮದುವೆಗೆ ಅಮೃತ ಸಿಂಧು ಮತ್ತು ಚಂದನ್ ಕೂಡ ಹಾಜರಿದ್ದರು.
ಗೀತಾ ಮತ್ತು ಶರತ್ ಪ್ರೀತಿಸಿ ಮದುವೆಯಾದ ರೀತಿಯಲ್ಲಿಯೇ ನಾವು ಕೂಡ ಮದುವೆಯಾಗಬೇಕೆಂದು ಮಾತನಾಡಿಕೊಂಡು ಸಿಂಧುವನ್ನ ಚಂದನ್ ತನ್ನ ಮನೆಗೆ ಕರೆದುಕೊಂಡು ಹೋಗಿ ಮದುವೆ ವಿಚಾರವಾಗಿ ಮಾತನಾಡಿದ್ದಾನೆ. ಈ ವೇಳೆ, ಕೆಲವು ವಿಚಾರಕ್ಕೆ ಸಿಂಧು ವಿರೋಧ ವ್ಯಕ್ತಪಡಿಸಿದ್ದು, ಚಂದನ್ ಆಕ್ರೋಶಗೊಂಡಿದ್ದಾನೆ. ಕೋಪಗೊಂಡ ಚಂದನ್ ಏಕಾಏಕಿ ಸಿಂಧುವಿನ ತಲೆಗೆ ಮರದ ತುಂಡಿನಿಂದ ಹೊಡೆದಿದ್ದಾನೆ. ಪರಿಣಾಮ ಆಕೆ ಅಲ್ಲಿಯೇ ಕುಸಿದು ಬಿದ್ದಿದ್ದಾಳೆ.
ಕೂಡಲೇ ಸ್ನೇಹಿತರು ಆಕೆಯನ್ನು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಒಳಪಡಿಸುವ ಮುನ್ನವೇ ಸಾವಿಗೀಡಾಗಿದ್ದಾಳೆ. ಈ ವೇಳೆ ಸ್ನೇಹಿತರೆಲ್ಲರೂ ಆಸ್ಪತ್ರೆಯಿಂದ ಕಾಲ್ಕಿತ್ತಿದ್ದು, ಚಂದನ್ ಮಾತ್ರ ಸಿಂಧು ಜೊತೆಯಲ್ಲಿ ಇದ್ದನು. ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕೊಲೆ ವಿಚಾರ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ ಭೇಟಿ ನೀಡಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಿದ್ದಾರೆ.
ಇನ್ನು ಈ ಕೊಲೆ ಸಂಬಂಧ ಆರೋಪಿಗಳಾದ ಹಾಸನ ತಾಲೂಕಿನ ದೊಡ್ಡಗೆಣಿಗೆರೆಯ ಶರತ್ ಮತ್ತು ಆಕೆಯ ಪತ್ನಿ ಗೀತಾ, ಪರಸನಹಳ್ಳಿ ಗ್ರಾಮದ ಪ್ರತಾಪ್ ಹಾಗೂ ಪ್ರಿಯಕರ ಚಂದನ್ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.