ಹಾಸನ: ಮನೆ ಕಟ್ಟುವ ವಿಚಾರಕ್ಕೆ ಅಣ್ಣ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ಸಹೋದರನೋರ್ವ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ.
ಸಯ್ಯದ್ ಖಲೀಲ್ (44) ಮೃತಪಟ್ಟ ದುರ್ದೈವಿ. ಈತ ಜಿಲ್ಲೆಯ ಸಕಲೇಶಪುರ ಪಟ್ಟಣದ ಚಂಪಕನಗರ ಬಡಾವಣೆಯ ನಿವಾಸಿಯಾಗಿದ್ದಾರೆ. ಬಡಾವಣೆಯ ಪ್ಯಾರೇಜಾನ್ ಎಂಬುವರ ದ್ವಿತೀಯ ಪುತ್ರ ಖಲೀಲ್ ಕಳೆದ ಹಲವಾರು ವರ್ಷಗಳಿಂದ ಅನಾರೋಗ್ಯಕ್ಕೊಳಗಾಗಿದ್ದರು. ಮಗನ ಕಷ್ಟವನ್ನು ನೋಡಲಾರದೆ ತಂದೆ ಈತನಿಗೆ ಮನೆ ಕಟ್ಟಲು ಕೊಂಚ ಆರ್ಥಿಕವಾಗಿ ನೆರವು ನೀಡುತ್ತಿದ್ದರು. ಹಿರಿಯ ಮಗನಿಗೆ ಸಹಾಯ ಮಾಡದ ತಂದೆ, ತಮ್ಮನಿಗೆ ನೀಡುತ್ತಾರಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿ ಖಲೀಲ್ ಮನೆ ಕಟ್ಟುವ ವಿಚಾರಕ್ಕೆ ಸುಖಾಸುಮ್ಮನೆ ಅಣ್ಣ ಸಯ್ಯದ್ ಜಹೀರ್ ಕ್ಯಾತೆ ತೆಗೆದು ಖಲೀಲ್‌ಗೆ ವಿನಾ ಕಾರಣ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಇನ್ನು ಮನೆಯ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಇದರಿಂದ ಬೇಸತ್ತ ಖಲೀಲ್ ಚಿಂತೆಗೀಡಾಗಿ ತಮ್ಮ ಮನೆಯಲ್ಲೇ ಗುರುವಾರ ಸೀಮೆಎಣ್ಣೆ ಹಾಕಿಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ತಕ್ಷಣ ಆತನನ್ನು ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಖಲೀಲ್ ಮೃತಪಟ್ಟಿದ್ದಾರೆ.
ಇನ್ನು ಸಾಯುವ ಮೊದಲು ಖಲೀಲ್ ತನ್ನ ಸಹೋದರರ ವಿರುದ್ಧ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆರೋಪಿ ಪರಾರಿಯಾಗಿದ್ದು, ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಇನ್ನು ಮೃತನ ತಂದೆ ಈ ಸಂಬಂಧ ಸಕಲೇಶಪುರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.