ಹಾಸನ: ಜಿಲ್ಲಾಡಳಿತ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿಂದು 71ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.
ಗೌರವ ವಂದನೆ ಸ್ವೀಕರಿಸಿದ ಜಿಲ್ಲಾಧಿಕಾರಿ ಆರ್. ಗಿರೀಶ್, ಸಮಗ್ರ ಭಾರತದ ಒಕ್ಕೂಟ ವ್ಯವಸ್ಥೆಯಡಿ ಗಣರಾಜ್ಯದ ಉದಾತ್ತ ಪರಿಕಲ್ಪನೆಗಳು ಮತ್ತು ದೇಶದ ಪ್ರತಿಯೊಬ್ಬ ಪ್ರಜೆಯ ಹಿತದೃಷ್ಟಿಗೆ ನಮ್ಮ ಭಾರತ ಸಂವಿಧಾನ ನೀಡಿರುವ ಕೊಡುಗೆಗಳು ಅಪಾರ. ಇವುಗಳ ರಕ್ಷಣೆಯೊಂದಿಗೆ ದೇಶದ ಏಕತೆ ಮತ್ತು ಸಮಗ್ರತೆಗಳನ್ನು ಕಾಯ್ದುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ 2019-20ನೇ ಸಾಲಿನಲ್ಲಿ ಅತ್ಯುತ್ತಮ ಸೇವೆಗೈದ ರಾಜ್ಯ ಸರ್ಕಾರಿ ನೌಕರರು ಸರ್ವೋತ್ತಮ ಸೇವಾ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಭಾವೈಕ್ಯತೆ ಮೆರೆಯುವ ಹಾಡುಗಳಿಗೆ ಸಾವಿರಾರು ಮಕ್ಕಳು ನೃತ್ಯ ಪ್ರದರ್ಶನ ನೀಡಿ ಗಣ್ಯರ ಮತ್ತು ನೋಡುಗರ ಕಣ್ಮನ ಸೆಳೆದರು. ಜಿಲ್ಲೆಯ ವಿವಿಧ ಶಾಲೆಗಳ 1,500 ವಿದ್ಯಾರ್ಥಿಗಳ ಧ್ವಜ ಕವಾಯತು ಪ್ರದರ್ಶನ ನೋಡುಗರ ಮೆಚ್ಚುಗೆ ಗಳಿಸಿತು. ಅಲ್ಲದೇ, ಅಗ್ನಿ ಶಾಮಕ ಇಲಾಖೆ ವತಿಯಿಂದ ಅಗ್ನಿ ಸುರಕ್ಷತೆಯ ಕುರಿತಂತೆ ವಿವಿಧ ಬಗೆಯ ಅಗ್ನಿ ನಂದಕಗಳನ್ನು ಪ್ರಾಯೋಗಿಕವಾಗಿ ಬಳಸುವುದರ ಬಗ್ಗೆ ಪ್ರಾತ್ಯಕ್ಷತೆಯನ್ನು ನೀಡಲಾಯಿತು.
ದೇಶವೇ ಸಂಭ್ರಮಾಚರಣೆಯಲ್ಲಿರುವಾಗ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಣವಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೃಷಿ ಇಲಾಖೆಯಲ್ಲಿ ಮಾತ್ರ ಗಣರಾಜ್ಯೋತ್ಸವ ಆಚರಿಸದೇ ಧ್ವಜವನ್ನು ಬಾನಂಗಳಕ್ಕೆ ಹಾರಿಸದೆ ಅಗೌರವ ತೋರಲಾಗಿದೆ. ಹಾಗಾಗಿ, ಕೃಷಿ ಅಧಿಕಾರಿ ನಾಗರಾಜ್ ಮತ್ತು ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.