ಹಾಸನ: ಮರವೊಂದು ಏಕಾಏಕಿ ರಸ್ತೆಗೆ ಬಿದ್ದ ಪರಿಣಾಮ ಸ್ಪಲ್ಪದರಲ್ಲಿ ದೊಡ್ಡ ಅನಾಹುತವೊಂದು ತಪ್ಪಿದ್ದು, ಸ್ಥಳೀಯರು ರಸ್ತೆ ತಡೆ ನಡೆಸಿ ಅರಣ್ಯ ಇಲಾಖೆ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ.
ಆಲೂರು-ಬಿಕ್ಕೋಡು ರಸ್ತೆಯ ಕಾರ್ಜುವಳ್ಳಿ ಗೇಟ್ ಬಳಿ ಆಗ ತಾನೇ ಸಾರಿಗೆ ಬಸ್ ಪಾಸಾಗಿತ್ತು. ಇದರ ಬೆನ್ನಲ್ಲಿಯೇ ಮರವೊ೦ದು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಸಂಭವಿಸಬಹುದಾದ ದೊಡ್ಡ ದುರಂತ ತಪ್ಪಿದೆ. ಇದರಿಂದ ಒಂದು ಗಂಟೆ ಸಂಚಾರ ಅಸ್ತವ್ಯಸ್ತವಾಗಿ ಪ್ರಯಾಣಿಕರು ಪರದಾಡುವಂತಾಯಿತು. ಇಂತಹ ಘಟನೆಗೆ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ರಸ್ತೆಯ ಇಕ್ಕೆಲಗಳಲ್ಲಿರುವ ಶಿಥಿಲಾವ್ಯವಸ್ಥೆಯ ಮರಗಳನ್ನು ತೆರವುಗೊಳಿಸಲು ಅಧಿಕಾರಿಗಳು ಮುಂದಾಗಿಲ್ಲ ಎಂದು ಆರೋಪಿಸಿ ಸುತ್ತಮತ್ತಲಿನ ಗ್ರಾಮಸ್ಥರು ಕೆಲಕಾಲ ಪ್ರತಿಭಟನೆ ಮಾಡಿದ್ರು. ಸ್ಥಳಕ್ಕಾಮಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಪ್ರತಿಭಟನಾನಿರತರನ್ನ ಸಮಾಧಾನಪಡಿಸಿ 2-3 ದಿನಗಳಲ್ಲಿ ತೆರವುಗೊಳಿಸಲಾಗುವುದು ಎಂದು ತಿಳಿಸಿದರು.
ಒಂದು ತಿಂಗಳಿನಿಂದ ಸುಮಾರು 3-4 ರಸ್ತೆ ಅಪಘಾತಗಳಾಗಿದ್ದು, ಎಷ್ಟೋ ಜನ ಪ್ರಾಣ ಬಿಟ್ಟಿದ್ದಾರೆ. ರಸ್ತೆಯಲ್ಲಿ ಚಲಿಸುವ ವೇಳೆ ಮರ ಬಿದ್ದು, ಎಷ್ಟೋ ಮಂದಿ ಗಾಯಗೊಂಡಿದ್ದಾರೆ. ಇಂತಹ ಘಟನೆಗಳು ಮರುಕಳಿಸುತ್ತಿದ್ರೂ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.